ತುಮಕೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಚನ್ನಪಟ್ಟಣದಲ್ಲಿ ಅಷ್ಟೇ ಅಲ್ಲ ಸಂಡೂರು, ಶಿಗ್ಗಾವಿ ಸೇರಿ ಮೂರು ಕಡೆ ನಡೆಯಬೇಕಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದರು.
ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಸಿ.ಪಿ ಯೋಗೇಶ್ವರ್ಗೆ ಟಿಕೆಟ್ ವಿಚಾರದಲ್ಲಿಯೂ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಜೆಡಿಎಸ್-ಬಿಜೆಪಿ ಎಂಬ ಚರ್ಚೆಯಿಲ್ಲ, ನಾವು ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್ಗೆ ಹುಮ್ಮಸ್ಸು ಹೆಚ್ಚಿದೆ. ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಮೈತ್ರಿ ಒಪ್ಪಿದ್ದಾರೆ. ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಪ್ರಧಾನಿ ಮೋದಿಗೆ ಕೊಡುಗೆ ನೀಡಿದ್ದಾರೆ. ತುಮಕೂರಿನಲ್ಲಿ ವಿ.ಸೋಮಣ್ಣ ಗೆದ್ದಿದ್ದಾರೆ. ಮಂತ್ರಿಗಳಾಗಿ ಕೆಲಸ ಮಾಡ್ತಿದ್ದಾರೆ. ಸ್ಥಳೀಯ ಚುನಾವಣೆ, ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ನಟ ದರ್ಶನ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನಾನು ಹೆಚ್ಚಾಗಿ ಮಾತನಾಡಲ್ಲ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನಿಗೆ ಎಲ್ಲರೂ ಕೂಡ ತಲೆಬಾಗಬೇಕು. ಈ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ದರ್ಶನ್ ಅಭಿಮಾನಿಗಳಿಗೆ ಏನು ಹೇಳಲ್ಲ ಎಂದು ತಿಳಿಸಿದರು.
ತುಮಕೂರಿನಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಸದಸ್ಯತ್ವ ನೋಂದಣಿ, ಬೂತ್ ಕಮಿಟಿ ರಚನೆ ಸಭೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ: 'ಚನ್ನಪಟ್ಟಣದಲ್ಲಿ ನಾನೇ ಕ್ಯಾಂಡಿಡೇಟ್.. ಮತದಾರರು ವೋಟ್ ಹಾಕೋದೂ ನನಗೇ': ಡಿಸಿಎಂ ಡಿಕೆಶಿ - Channapatna candidate