ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿರುವ ನಟ ದರ್ಶನ್ ಅವರ ಮಹಿಳಾ ಅಭಿಮಾನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಜೆಡಿಎಸ್ ಮುಖಂಡರು ಪೊಲೀಸರಿಗೆ ದೂರು ಸಲ್ಲಿಸಿದರು.
ಕೆ.ಆರ್.ಪೇಟೆ ಹಾಗೂ ಮಂಡ್ಯ ನಗರದಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಮಂಡ್ಯ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ರಘುನಂದನ್ ಎಂ.ಎಸ್. ದೂರು ದಾಖಲಿಸಿದ್ದಾರೆ.
ದರ್ಶನ್ ಮಹಿಳಾಭಿಮಾನಿ ಹೇಳಿದ್ದೇನು?: "ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ಧ ಧಿಕ್ಕಾರ ಕೂಗಿಸ್ತಿಯಾ?. ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸೋಕೆ ಚಾನ್ಸ್ ಕೊಟ್ಟಿರೋದಕ್ಕೆ ಡಿ ಬಾಸ್ ವಿರುದ್ಧ ಸ್ಕೆಚ್ ಹಾಕ್ತಿಯಾ?. ಸುಮಲತಾರಿಂದ ಭಿಕ್ಷೆ ಹಾಕಿಸಿಕೊಂಡ ಮಗ" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಲ್ಲದೇ , ಅವಾಚ್ಯ ಪದಗಳಿಂದಲೂ ನಿಂದಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕುಮಾರಸ್ವಾಮಿ ಅವರಿಗೂ ಮತ್ತು ದರ್ಶನ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದಾಗ್ಯೂ ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಹೆಸರನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಪೇಸ್ಬುಕ್ನಲ್ಲಿ ಬಾಯಿಗೆ ಬಂದಂತೆ ಬೈದು ಅವಮಾನ ಮಾಡಿದ್ದಾರೆ. ಇದರಿಂದ ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ನೋವಾಗಿದೆ. ವಿಡಿಯೋ ವೈರಲ್ ಆಗಿರುವುದರಿಂದ ಮಂಗಳ ಮತ್ತು ಅವರಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಕಾರ್ಯಕರ್ತರು ದೂರಿನಲ್ಲಿ ಒತ್ತಾಯಿಸಿದ್ದಾರೆ..
ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಕೊಡುವುದು ನನ್ನ ಜವಾಬ್ದಾರಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ - H D Kumaraswamy