ಧಾರವಾಡ: ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯಿತಿ ಸಿಪಾಯಿಯ ಪುತ್ರಿಯೊಬ್ಬಳು ಬರೋಬ್ಬರಿ 9 ಚಿನ್ನದ ಪದಕಗಳನ್ನು ಪಡೆದಿದ್ದಾಳೆ. ಜಯಶ್ರೀ ತಳವಾರ ಈ ಸಾಧನೆ ಮಾಡಿದ ವಿದ್ಯಾರ್ಥಿಯಾಗಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2022ರಲ್ಲಿ ಅವರು ಪ್ರವೇಶ ಪಡೆದಿದ್ದರು. 2023-24ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಹೊರ ಹೊಮ್ಮಿದ್ದಾರೆ. ಧಾರವಾಡದ ಗಾಂಧಿ ಭವನದಲ್ಲಿ ಇಂದು ನಡೆದ ವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರು ಜಯಶ್ರೀ ತಳವಾರ ಅವರಿಗೆ ಪದಕ ಪ್ರದಾನ ಮಾಡಿದರು. ಮುಖ್ಯ ಅತಿಥಿ ಪ್ರೊ.ಎಸ್.ಅಯ್ಯಪ್ಪನ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ, ಕುಲಸಚಿವ ಡಾ.ಎ.ಚನ್ನಪ್ಪ, ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಹಾಗೂ ಇನ್ನೀತರ ಗಣ್ಯರ ಸಮ್ಮುಖದಲ್ಲಿ ಜಯಶ್ರೀಗೆ ಪದಕ ನೀಡಿ ಗೌರವಿಸಲಾಯಿತು.
ಚಿನ್ನದ ಹುಡುಗಿ: ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಜಯಶ್ರೀ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರ ತಾಯಿ ಮಂಜುಳಾ ಆಶಾ ಕಾರ್ಯಕರ್ತೆಯಾಗಿದ್ದರೆ, ತಂದೆ ಮಹಾಂತೇಶ ಗ್ರಾಮದ ಗ್ರಾಮ ಪಂಚಾಯತ್ನ ಗ್ರೂಪ್ ಡಿ ದರ್ಜೆಯ ಸಿಪಾಯಿಯಾಗಿದ್ದಾರೆ. ಬಡತನದ ಕುಟುಂಬದಿಂದ ಬಂದಿದ್ದರೂ ಛಲತೊಟ್ಟು ಓದಿದ ಜಯಶ್ರೀ ಇದೀಗ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ.
ಹಳ್ಳಿ ಹುಡುಗಿ: ಜಯಶ್ರೀ ಗದಗ ಜಿಲ್ಲೆಯ ರೋಣ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪೂರೈಸಿದರೆ, ಧಾರವಾಡದ ಹುರುಕಡ್ಲಿ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ಹಾಸ್ಟೆಲ್ನಲ್ಲಿದ್ದು ಓದಿರುವ ಜಯಶ್ರೀ ಹಳ್ಳಿ ಹುಡುಗಿಯಾಗಿ ಚಿನ್ನದ ಪದಕ ಗಿಟ್ಟಿಸಿರುವುದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾದ ಸಂಗತಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ತಾಯಿ ಆಶಾ, ತಂದೆ ಸಿಪಾಯಿ: ತನ್ನ ಸಹೋದರಿ ಜ್ಯೋತಿ ಕೂಡ ಇದೇ ವಿಶ್ವವಿದ್ಯಾಲಯದಲ್ಲಿ ಲೈಬ್ರರಿ ಸೈನ್ಸ್ ಓದಿದ್ದು, ನನ್ನ ಈ ಸಾಧನೆಗೆ ಸಹೋದರಿ ಜ್ಯೋತಿ ನಿರಂತರ ಮಾರ್ಗದರ್ಶನವೇ ಕಾರಣ. ನನ್ನ ತಂದೆ ಗ್ರಾಮ ಪಂಚಾಯಿತಿಯಲ್ಲಿ ಸಿಪಾಯಿ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಯಿ ಆಶಾ ಕಾರ್ಯಕರ್ತೆಯಾಗಿದ್ದಾರೆ. ನನ್ನ ತಾಯಿಯ ದುಡಿಮೆ, ಅವರು ರೂಢಿಸಿಕೊಂಡ ಪ್ರಾಮಾಣಿಕತೆ ಹಾಗೂ ಒಳ್ಳೆಯವರಾಗಿ ಬಾಳಬೇಕು ಎನ್ನುವ ಅವರ ಆದರ್ಶ ವಿಚಾರಗಳೇ ನನಗೆ ಹಾಗೂ ನನ್ನ ಓದಿಗೆ ಸದಾಕಾಲ ಸ್ಫೂರ್ತಿಯಾಗಿದೆ. ಕವಿವಿಯ ಪತ್ರಿಕೋದ್ಯಮ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಪ್ರೊ.ಜೆ.ಎಂ.ಚಂದುನವರ, ವಿಭಾಗದ ಈಗಿನ ಮುಖ್ಯಸ್ಥರಾದ ಡಾ.ಸಂಜಯ್ ಮಾಲಗತ್ತಿ, ಉಪನ್ಯಾಸಕರಾದ ಮಂಜುನಾಥ ಅಡಿಗಲ್, ಡಾ.ನಾಗರಾಜ, ಡಾ.ವಿಜಯಲಕ್ಷ್ಮಿ ಹಾಗೂ ಇನ್ನಿತರರು ತೋರಿದ ಮಾರ್ಗದರ್ಶನದಿಂದಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಈ ಸಾಧನೆಗೆ ಸದಾಕಾಲ ಒತ್ತಾಸೆಯಾದ ಎಲ್ಲ ಸ್ನೇಹಿತರ ಪ್ರೀತಿಗೆ ಅಭಿನಂದನೆ, ಹಳ್ಳಿಯ ಹುಡುಗಿಯರೂ ಸಾಧನೆ ಮಾಡಬಲ್ಲರು ಎನ್ನುವಂತೆ ನನ್ನಂಥವರಿಗೆ ಓದಿನ ರುಚಿ ಹತ್ತಿಸುವ ಈ ಧಾರವಾಡ ಮಣ್ಣಿಗೆ, ನೆಲಕ್ಕೆ ನಾನು ಸದಾ ಋಣಿ. ನಮ್ಮಂಥ ಬಡ ಹುಡುಗಿಯರಿಗೆ ತಾಯಿ ಪ್ರೀತಿ ತೋರಿ ಕರುಣಿಸಿದ ಧಾರವಾಡ ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಜಯಶ್ರೀ ತಳವಾರ.
ಲೈಬ್ರರಿ ಸೈನ್ಸ್ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದ ವಿಜೇತೆ ರಕ್ಷಣಾ ಶಿವಳ್ಳಿ ಕೂಡ ಮಾತನಾಡಿದ ತಮ್ಮ ಖುಷಿ ಹಂಚಿಕೊಂಡರು.
ಇದನ್ನೂ ಓದಿ: ಬಡತನದಲ್ಲಿ ಅರಳಿದ ಪ್ರತಿಭೆ: ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದ ಮಯೂರ್ ಖಿಲಾರಿ! - KUD Convocation