ಬೆಂಗಳೂರು: ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವ ಜಿ.ಪರಮೇಶ್ವರ್ ಅವರು ಹೆಗ್ಡೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಹೆಗ್ಡೆ, ಮೂಡಿಗೆರೆ ಬಿಜೆಪಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ, ಸಚಿವರಾದ ಕೆ.ಜೆ.ಜಾರ್ಜ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಜಯಪ್ರಕಾಶ್ ಹೆಗ್ಡೆಗೆ ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಹೆಗ್ಡೆ ಅವರು ಇತ್ತೀಚೆಗಷ್ಟೇ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ, ಸೋಲು ಅನುಭವಿಸಿದ್ದರು. ಬಳಿಕ ಬದಲಾದ ಸನ್ನಿವೇಶದಲ್ಲಿ ಅವರು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರಿಕೊಂಡಿದ್ದರು. ಬಿಜೆಪಿ ಸರ್ಕಾರ ಇದ್ದಾಗ ಹೆಗ್ಡೆ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿತ್ತು. ರಾಜ್ಯದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ವರದಿಯನ್ನು ಇತ್ತೀಚಿಗಷ್ಟೇ ಅವರು ಸರ್ಕಾರಕ್ಕೆ ಸಲ್ಲಿಸಿದರು.
ಕಹಿ ನೆನಪು ಬಿಟ್ಟು, ಸಿಹಿ ನೆನಪು ಜೊತೆಗೆ ಹೋಗಬೇಕು: ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಕಹಿ ನೆನಪುಗಳನ್ನು ಬಿಟ್ಟು ಸಿಹಿ ನೆನಪುಗಳ ಜೊತೆಗೆ ಹೋಗಬೇಕು ಎಂದು ಬಂದಿದ್ದೇನೆ. ಸರ್ಕಾರದ ಗ್ಯಾರಂಟಿ ಯೋಜನೆ ಮನೆ ಮನೆಗೆ ಹೋಗಿ ತಲುಪಿಸುವ ಕೆಲಸ ಆಗಬೇಕು. ಹಿಂದಿನ ನಮ್ಮ ಕೆಲಸ ಕಾರ್ಯಗಳನ್ನು ಯುವಜನರಿಗೆ ಹೇಳಿದರೆ ಖಂಡಿತಾ ಮತ್ತೆ ನಾವು ಕರಾವಳಿ ಭಾಗದಲ್ಲಿ ಅಧಿಕಾರ ಹಿಡಿಯಬಹುದು. ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರನ್ನು ನಾವು ನೆನಪಿನಲ್ಲಿಟ್ಟುಕೊಂಡರೆ ಮತ್ತೆ ನಾವು ಆಯ್ಕೆಯಾಗಲು ಸಾಧ್ಯ ಎಂದರು.
ಯಾರಿಗೆ ಟಿಕೆಟ್ ಕೊಡುತ್ತೀರಿ ಅವರನ್ನು ನಾವು ಗೆಲ್ಲಿಸಿಕೊಂಡು ಬರುತ್ತೇವೆ. ಹಿಂದುಳಿದ ವರ್ಗಗಳ ಆಯೋಗದ ವರದಿಯ ಬಗ್ಗೆ ಚರ್ಚೆ ಶುರುವಾಗಿದೆ. ಯಾರು ಅದನ್ನು ಓದದೇ ನೋಡದೆ ಚರ್ಚೆ ಮಾಡುವುದು ಬೇಡ. ಯಾವ ಸಮುದಾಯಕ್ಕೂ ಅದರಿಂದ ಸಮಸ್ಯೆ ಆಗಲ್ಲ ಎಂದರು.
ಸಿ.ಟಿ.ರವಿಗೆ ಮತ್ತೆ ಬುದ್ಧಿ ಕಲಿಸುತ್ತೇವೆ: ಇದೇ ವೇಳೆ ಮಾತನಾಡಿದ ಎಂ.ಪಿ. ಕುಮಾರಸ್ವಾಮಿ, ಕಳೆದ ಬಾರಿ ಶಿವಕುಮಾರ್ ಅವರು ನನ್ನನ್ನು ಕಾಂಗ್ರೆಸ್ಗೆ ಕರೆದ್ರು. ತಾಯಿದ್ರೋಹ ಮಾಡಬಾರದು ಎಂಬ ಕಾರಣಕ್ಕೆ ಅಲ್ಲಿಯೇ ಇದ್ದೆ. ಈಗ ನಾನು ಶಾಸಕನೂ ಅಲ್ಲ. ಬಹಳಷ್ಟು ಜನ ಕಾಂಗ್ರೆಸ್ ಪಕ್ಷವನ್ನ ಬೈತಾರೆ. ಮಹಿಳೆಯರಿಗೆ ಫ್ರೀ ಕೊಟ್ರೆ ಗಂಡಸರು ಬೈಯ್ತಾರೆ. ಆದ್ರೆ ಸಾಮಾಜಿಕ ನ್ಯಾಯದ ಸರ್ಕಾರ ಇಲ್ಲಿ ಮಾತ್ರ ಇದೆ. ಅಲ್ಲಿ ಹೋಗಬೇಡಿ ಸರ್ಕಾರ ಬೀಳುತ್ತೆ ಅಂದ್ರು. ಯಾಕೆ ಬೀಳುತ್ತೆ ಅಂತ ನಾನು ಇಲ್ಲಿಗೆ ಬಂದಿದ್ದೇನೆ ಎಂದರು.
ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು: ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ಮೂರ್ನಾಲ್ಕು ದಿನದಲ್ಲಿ ದೆಹಲಿಗೆ ನಮ್ಮನ್ನು ಕರೆಯುತ್ತಾರೆ. ಮಾ.14, 15ರಂದು ನಮ್ಮನ್ನ ಕರೆಯಬಹುದು. ಆ ಮೇಲೆ ಟಿಕೆಟ್ ಘೋಷಣೆಯಾಗಲಿದೆ. ಟಿಕೆಟ್ ಯಾರಿಗೆ ಕೊಡಲಿ. ಎಲ್ಲ ಒಟ್ಟಿಗೆ ಕೆಲಸ ಮಾಡಬೇಕು ಎಂದರು.
ಜಯಪ್ರಕಾಶ್ ಹೆಗ್ಡೆ ಟಿಕೆಟ್ ಕೊಟ್ಟರೆ ಗೆಲ್ತಾರೆ: ಇದೇ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಯಪ್ರಕಾಶ್ ಹೆಗ್ಡೆ ಟಿಕೆಟ್ ಕೊಟ್ಟರೆ ಗೆಲ್ತಾರೆ. ಅಲ್ಲಿನ ಜನ ಅವರನ್ನ ಗೆಲ್ಲಿಸ್ತಾರೆ. ಜಾತಿಗಣತಿಯನ್ನ ಅವರು ಕೊಟ್ಟಿದ್ದಾರೆ. ಯಾವ್ಯಾವ ಜಾತಿ ಎಷ್ಟಿವೆ ಗೊತ್ತಾಗಲಿದೆ ಎಂದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಜೆಡಿಎಸ್ ಸಿದ್ಧತೆ: ಕುಣಿಗಲ್ - ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ನಡೆಸಿದ ದೇವೇಗೌಡರು