ಕಾರವಾರ: ಪ್ರವಾಸಕ್ಕೆ ಆಗಮಿಸಿದ ಜಪಾನ್ ದೇಶದ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಉತ್ತರ ಕನ್ನಡದ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಮಿ ಯಮಾಝಕಿ(40) ನಾಪತ್ತೆಯಾದವರು. ಫೆಬ್ರವರಿ 5ರಂದು ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿ ಇಲ್ಲಿನ ಬಂಗ್ಲೆಗುಡ್ಡದ ನೇಚರ್ ಕಾಟೇಜ್ನಲ್ಲಿ ಪತಿಯ ಜೊತೆಗೆ ತಂಗಿದ್ದರು. ಆದರೆ ಅಂದು ಬೆಳಗ್ಗೆ 10.30ರ ವೇಳೆ ಕಾಟೇಜ್‌ನಿಂದ ಹೊರಹೋಗಿದ್ದ ಮಹಿಳೆ ಮರಳಿ ಬಾರದೇ ನಾಪತ್ತೆಯಾಗಿರುವ ಬಗ್ಗೆ ಪತಿ ದೈ ಯಮಾಝಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇತ್ತೀಚಿನ ಘಟನೆಗಳು-ಅರುಣಾಚಲ ಪ್ರದೇಶದ ಮಹಿಳೆ ನಾಪತ್ತೆ: ಬಿಹಾರದ ಬೋಧಗಯಾದಲ್ಲಿ ಅರುಣಾಚಲ ಪ್ರದೇಶದ ಪ್ರವಾಸಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದ ಘಟನೆ ಕಳೆದ ತಿಂಗಳು ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರವಾಸಿ ಮಹಿಳೆ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ನಾಪತ್ತೆಯಾದ ಮಹಿಳೆ 32 ವರ್ಷದ ತಾವ್ ಲೋಬ್ಸಾಂಗ್ ತೆಸರಿಂಗ್ ಎಂದು ತಿಳಿದು ಬಂದಿತ್ತು. ಇವರು ಅರುಣಾಚಲ ಪ್ರದೇಶದ ತಬಾನಿ ಜಿಲ್ಲೆಯ ಜಂಗ್ ಪೊಲೀಸ್ ಠಾಣೆಯ ಮಹೋ ನಿವಾಸಿಯಾಗಿದ್ದರು.
ವಿದೇಶಿ ಮಹಿಳೆ ಸಾವು: ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ಆಗ್ರಾದಲ್ಲಿ ವಿದೇಶಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಫ್ರಾನ್ಸ್ ದೇಶದ ಸುಸಾನೆ ಸಾವನ್ನಪ್ಪಿದವರು ಎಂದು ಗುರುತಿಸಲಾಗಿತ್ತು. ಈಕೆ ತಮ್ಮ ಪತಿ ಮತ್ತು 20 ಸದಸ್ಯರ ಕುಟುಂಬಸ್ಥರೊಂದಿಗೆ ಸೇರಿ ಭಾರತಕ್ಕೆ ಬಂದಿದ್ದರು. ಈ ಎಲ್ಲ ಫ್ರೆಂಚ್ ಪ್ರವಾಸಿಗರು ಭರತ್‌ಪುರಕ್ಕೆ ಭೇಟಿ ನೀಡಿದ ನಂತರ ಫತೇಪುರ್ ಸಿಕ್ರಿ ಸ್ಮಾರಕಕ್ಕೆ ತೆರಳಿದ್ದರು. ಆದರೆ, ಈ ವೇಳೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆಯತಪ್ಪಿ 8 ಅಡಿ ಎತ್ತರದ ಗೋಡೆಯಿಂದ ನೆಲಕ್ಕೆ ಬಿದ್ದಿದ್ದರು. ಇದರಿಂದ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು.
ಬಳಿಕ ಸ್ಥಳಕ್ಕೆ ಆಂಬ್ಯುಲೆನ್ಸ್ ತಲುಪಲು ಸಹ ತಡವಾಗಿತ್ತು. ಕೆಲ ಸಮಯದ ನಂತರ ಸುಸಾನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಕುರಿತು ಜಿಲ್ಲಾಡಳಿತ ತನಿಖೆಗೆ ಆದೇಶಿಸಿತ್ತು.
ಇದನ್ನೂ ಓದಿ: ಕೋವಿಡ್ ಬಳಿಕ ಗೋವಾದಲ್ಲಿ ದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳ