ಮೈಸೂರು: ಕಾಂಗ್ರೆಸ್ಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ಪಕ್ಷಕ್ಕೆ ಗುಡ್ ಬೈ ಹೇಳಿ ಮತ್ತೆ ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಂಜನಗೂಡು ಪಟ್ಟಣದ ಮೇದರ ಗೆರೆಯ ಗೋಡೆ ಬರಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಶದಲ್ಲಿ ಮತ್ತೊಮ್ಮೆ ಮೋದಿ ಎಂಬ ಗೋಡೆಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದಕ್ಕೂ ಮೊದಲು ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿದ ಮಾಜಿ ಸಿಎಂ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಗರ್ಭಗುಡಿಯ ಬಳಿ ಕುಳಿತು ಎರಡು ನಿಮಿಷಗಳ ಕಾಲ ನಂಜುಂಡನ ಧ್ಯಾನ ಮಾಡಿದರು. ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಮುಖಂಡರುಗಳು ಅವರಿಗೆ ಜೊತೆಯಾದರು.
ನಂತರ ಮಾಧ್ಯಮದ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, "ಬಿಜೆಪಿ ನಮ್ಮ ತವರು ಮನೆಗೆ ಮತ್ತೆ ಮರಳಿದ್ದೇನೆ. ಬಿಜೆಪಿಯ ರಾಜ್ಯ ಮುಖಂಡರು, ಕೇಂದ್ರ ಮುಖಂಡರು ಮತ್ತು ಸ್ಥಳೀಯ ಕಾರ್ಯಕರ್ತರಿಂದ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಮ್ಮ ಪರಿಶ್ರಮವು ಕೂಡ ಉತ್ತಮವಾಗಿತ್ತು. ನಮ್ಮ ಕೆಲ ವೈಯಕ್ತಿಕ ವಿಚಾರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದೆ. ಅಲ್ಲಿಯೂ ಕೂಡ ನನಗೆ ಯಾವುದೇ ರೀತಿಯ ತೊಂದರೆ ಇರಲಿಲ್ಲ. ಆ ಪಕ್ಷದ ನಾಯಕರು ತಮ್ಮನ್ನು ಗೌರವಯುತವಾಗಿಯೇ ನಡೆಸಿಕೊಂಡಿದ್ದಾರೆ. ಆದರೆ, ಕೇಂದ್ರದ ಬಿಜೆಪಿ ಮುಖಂಡರು ನನ್ನನ್ನು ಪ್ರಬಲವಾಗಿ ಪಕ್ಷಕ್ಕೆ ಬರುವಂತೆ ಮನವೊಲಿಸಿದರು, ಹೀಗಾಗಿ ನನ್ನ ಮನೆಗೆ ನಾನು ಬಂದಿದ್ದೇನೆ" ಎಂದು ಹೇಳಿದರು.
"ನಾನು ಕೂಡ ಉತ್ತಮವಾದ ನಿರ್ಣಯ ತೆಗೆದುಕೊಂಡು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯದಲ್ಲಿ ಸಾಕಷ್ಟು ಖಾಸಗಿ ಸರ್ವೇಗಳನ್ನು ಮಾಡಿಸಲಾಗಿದೆ. 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಭರವಸೆ ಇದೆ. ಕೇಂದ್ರದ ವರಿಷ್ಠರು ಸೂಚನೆ ನೀಡಿದರೆ ನಾನು ಪಾರ್ಲಿಮೆಂಟ್ ಎಲೆಕ್ಷನ್ಗೆ ಸ್ಪರ್ಧೆ ಮಾಡುತ್ತೇನೆ" ಎಂದು ಇದೇ ವೇಳೆ ಜಗದೀಶ್ ಶೆಟ್ಟರ್ ತಮ್ಮ ಮನದಿಂಗಿತವನ್ನು ಬಹಿರಂಗ ಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹರ್ಷವರ್ಧನ್ ಬಿಜೆಪಿ ಪಕ್ಷದ ಬ್ಲಾಕ್ ಅಧ್ಯಕ್ಷರಾದ ಹೊರಳವಾಡಿ ಮಹೇಶ್, ಶ್ರೀನಿವಾಸ್ ರೆಡ್ಡಿ, ಮರಳೂರು ಮಹೇಶ್ ಕುಮಾರ್ ಉಮೇಶ್ ಮೋದಿ ಸೇರಿದಂತೆ ಸಾಕಷ್ಟು ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ಇದನ್ನೂ ಓದಿ: ಲೋಕಸಭೆ: ನಾನು ಟಿಕೆಟ್ ಆಕಾಂಕ್ಷಿಯಲ್ಲ, ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುವೆ-ಶೆಟ್ಟರ್
ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷ ಟಿಕೆಟ್ ನೀಡಲಿಲ್ಲ ಹಾಗೂ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ ಎಂದು ಮುನಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಆದರೆ ಇತ್ತೀಚೆಗೆ ಅವರು ದೆಹಲಿಯಲ್ಲಿ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.