ಬೆಳಗಾವಿ: ಬೆಳಗಾವಿ ಬಿಜೆಪಿ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮನೆ ಮಗ, ಜಗದೀಶ್ ಹೊರ ಜಿಲ್ಲೆಯವರು ಎಂಬ ಮಾತಿಗೆ ಮತದಾರರು ಮನ್ನಣೆ ನೀಡಿಲ್ಲ. ಈ ಗೆಲುವಿನ ಕುರಿತು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿಯ ವಿಜೇತ ಅಭ್ಯರ್ಥಿ ಜಗದೀಶ್ ಶೆಟ್ಟರ್ ಈಟಿವಿ ಭಾರತನೊಂದಿಗೆ ಮಾತನಾಡಿದ್ದಾರೆ. ಇದು ಅಭೂತಪೂರ್ವ, ಇತಿಹಾಸ ನಿರ್ಮಾಣ ಮಾಡುವ ಜಯ. ಬೆಳಗಾವಿ ಜನತೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಜನರು ಬಹಳ ಪ್ರೀತಿ, ವಿಶ್ವಾಸ, ಆತ್ಮೀಯವಾಗಿ ನನಗೆ ಆಶೀರ್ವಾದ ಮಾಡಿದ್ದಾರೆ. ಅವರಿಗೆ ನಾನು ಚಿರಋಣಿ ಆಗಿರುತ್ತೇನೆ. ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಪಕ್ಷದ ಎಲ್ಲಾ ಧುರೀಣರು, ಎಲ್ಲಾ ತಾಲೂಕುಗಳ ಅಧ್ಯಕ್ಷರು, ಕಾರ್ಯಕರ್ತರು, ಗಟ್ಟಿಯಾಗಿ ನಿಂತು ಬೆಂಬಲಿಸಿದ್ದರಿಂದ ನಾನು ಗೆಲ್ಲಲು ಸಾಧ್ಯವಾಗಿದೆ ಎಂದು ತಿಳಿಸಿದರು.
ವಿರೋಧಿಗಳು ನನ್ನ ವಿರುದ್ಧ ಟೀಕೆ, ಟಿಪ್ಪಣಿ ಮಾಡಿದಾಗ ಅವರಷ್ಟು ಕೆಳಹಂತಕ್ಕೆ ಹೋಗಿ ಟೀಕೆ ಮಾಡಲು ಹೋಗುವುದಿಲ್ಲ ಎಂದು ಹೇಳಿದ್ದೆ. ಮತದಾನದ ದಿನ, ಏಳರಂದು ಜನ ಉತ್ತರ ಕೊಡುತ್ತಾರೆ ಎಂದು ತಿಳಿಸಿದ್ದೆ. ಎಲ್ಲದಕ್ಕೂ ಜನರಿಂದು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ತಿರುಗೇಟು ಕೊಟ್ಟರು.
ಈ ಹಿಂದೆ ಶೆಟ್ಟರ್ಗೆ ನಿಮ್ಮ ಅಡ್ರೆಸ್ ಎಲ್ಲಿದೆ? ಎಂಬ ಪ್ರಶ್ನೆ ಎದುರಾಗಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಡ್ರೆಸ್ ಎಲ್ಲಿ? ಏನು? ಎಂಬುದನ್ನು ಈಗಾಗಲೇ ಜನ ಹೇಳಿ ಬಿಟ್ಟಿದ್ದಾರೆ. ಬೆಳಗಾವಿಯಲ್ಲಿ ನಾನು ಗಟ್ಟಿಯಾಗಿ ಇರಬೇಕೆಂದು 1 ಲಕ್ಷ 75 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಈ ಮೂಲಕ ಬೆಳಗಾವಿಯಲ್ಲಿ ಶೆಟ್ಟರ್ ಗಟ್ಟಿಯಾಗಿ ಇರುತ್ತಾರೆಂದು ಜನರೇ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯಿಂದ ಒತ್ತು ಕೊಟ್ಟು ಕೆಲಸ ಮಾಡುತ್ತೇನೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಬೆಳಗಾವಿಯನ್ನು ಮಾದರಿ ಲೋಕಸಭಾ ಕ್ಷೇತ್ರ ಮಾಡುತ್ತೇನೆ ಎಂದು ಶೆಟ್ಟರ್ ಭರವಸೆ ನೀಡಿದರು. ಜೊತೆಗೆ ಕ್ಷೇತ್ರದ ಜನರಿಗೆ ನಾನು ಚಿರಋಣಿಯಾಗಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸವನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಆಶಯದಂತೆ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ಬದ್ಧನಿದ್ದೇನೆ ಎಂದು ಭರವಸೆ ನೀಡಿದರು. ಜೊತೆಗೆ, ಕೇಂದ್ರದಲ್ಲಿ ಮಂತ್ರಿಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷ ಯಾವ ಸಂದರ್ಭದಲ್ಲಿ ಏನೇನು ಜವಾಬ್ದಾರಿ ಕೊಟ್ಟಿದೆಯೋ ಅದನ್ನು ಮಾಡಿದ್ದೇನೆ ಎಂದು ತಿಳಿಸಿದರು.