ಬೆಳಗಾವಿ: ಸಿಎಂ ಸಿದ್ದರಾಮಯ್ಯನವರು ಸಾಚಾ ಆಗಿದ್ದರೆ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಬೇಕು ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಸವಾಲು ಹಾಕಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಪದೇ ಪದೇ ನಾನು ಪ್ರಾಮಾಣಿಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನಿಮ್ಮ ಪ್ರಾಮಾಣಿಕತೆ ಎಲ್ಲಿದೆ ಎಂದು ಪ್ರಶ್ನಿಸಿದ ಶೆಟ್ಟರ್, ಸದನದಲ್ಲಿ ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚಿಸಿದಾಗ ಚರ್ಚೆಗೆ ಅವಕಾಶ ಕೊಡಲಿಲ್ಲ. ಮಾಧ್ಯಮಗೋಷ್ಠಿ ನಡೆಸಿ ಉತ್ತರ ಕೊಟ್ಟಿದ್ದೀರಿ. ಇದೆಲ್ಲವನ್ನೂ ನೋಡಿದಾಗ ನೀವು ತಪ್ಪು ಮಾಡಿರುವುದು ಗೊತ್ತಾಗುತ್ತದೆ ಎಂದರು.
ಇನ್ನು ಅರ್ಕಾವತಿ ಹಗರಣ ಬಗ್ಗೆ ನಾನು ಧ್ವನಿ ಎತ್ತಿದ್ದೆ. ನ್ಯಾಯಮೂರ್ತಿ ಕೆಂಪಣ್ಣ ಆಯೋಗ ನೀಡಿದ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಎಂದು ಒತ್ತಾಯಿಸಿದರು.
ಮುಡಾ ಹಗರಣದ ಕುರಿತು ಪ್ರತಿಕ್ರಿಯಿಸಿ, ಪ್ರತಿಪಕ್ಷವಾಗಿ ನಾವು ಸರ್ಕಾರ ಮಾಡಿದ ತಪ್ಪನ್ನು ಪಾದಯಾತ್ರೆ ಮೂಲಕ ಜನರ ಬಳಿ ಹೋಗಿ ಜಾಗೃತಿ ಮೂಡಿಸಿದ್ದೇವೆ. ಮುಡಾ, ಎಸ್ಸಿ, ಎಸ್ಟಿ ಹಗರಣದಲ್ಲಿ ಸರ್ಕಾರದ ನೇರ ಪಾತ್ರ ಇದೆ. ಹಾಗಾಗಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದೇವೆ ಎಂದರು.
ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಕುರಿತು ನಾನು ಹೆಚ್ಚು ಚರ್ಚೆ ಮಾತನಾಡಲು ಹೋಗುವುದಿಲ್ಲ. ಈ ವಿಚಾರಗಳನ್ನು ವರಿಷ್ಠರು ಗಮನಿಸುತ್ತಾರೆ. ಸರಿಯಾದ ಸಮಯದಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಭಿನ್ನಮತೀಯರ ವಿರುದ್ಧ ಏಕೆ ಹೈಕಮಾಂಡ್ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗೆ, ನಾನು ಹೈಕಮಾಂಡ್ ಅಲ್ಲ, ಎಲ್ಲವನ್ನೂ ವರಿಷ್ಠರು ಸಾಂದರ್ಭಿಕವಾಗಿ ಗಮನಿಸುತ್ತಾರೆ. ಸಂದರ್ಭ ಬಂದಾಗ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಎಲ್ಲರ ಜೊತೆಗೆ ಮಾತನಾಡಿ ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಕೂಡಲಸಂಗಮದಿಂದ ಬಳ್ಳಾರಿ ಪಾದಯಾತ್ರೆಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ನಾನು ಪಕ್ಷಕ್ಕೆ ಬದ್ಧನಾದ ವ್ಯಕ್ತಿ. ಪಕ್ಷ ಕೈಗೊಳ್ಳುವ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಕ್ರಿಯಿಸಿ, ಈ ಗ್ಯಾರಂಟಿಗಳನ್ನು ಜಾರಿಗೆ ತರುವಷ್ಟರಲ್ಲಿ ಕಾಂಗ್ರೆಸ್‌ನವರು ಹಣ್ಣು ಹಣ್ಣಾಗಿದ್ದಾರೆ. ಇನ್ನುಳಿದ ಭರವಸೆ ಈಡೇರಿಸುತ್ತಾರಾ? ಅಥವಾ ಈಡೇರಿಸುವುದಿಲ್ಲವೋ? ಎಂಬ ಪರಿಸ್ಥಿತಿಯಿದೆ ಎಂದು ಲೇವಡಿ ಮಾಡಿದರು.
ನಾನು ಮೊನ್ನೆ ಕಾರಟಗಿ, ಕೊಪ್ಪಳಕ್ಕೆ ಹೋಗಿ ಟಿಬಿ ಡ್ಯಾಮ್ ಗೇಟ್ ಒಡೆದಿರುವುದನ್ನು ಪರಿಶೀಲಿಸಿ ಬಂದಿದ್ದೇನೆ. ಮಧ್ಯಾಹ್ನ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದ್ದಾರೆ. ಹಣದ ಕೊರತೆಯಿಂದ ಹೊಸ ಯೋಜನೆ, ಹೊಸ ಡ್ಯಾಂ ನಿರ್ಮಾಣ ಬಿಟ್ಟುಬಿಡಿ. ಇರುವ ವ್ಯವಸ್ಥೆ ನಿರ್ವಹಣೆ ಮಾಡಲು ಆಗುತ್ತಿಲ್ಲ. ಕಾಂಗ್ರೆಸ್ ಚಿತ್ತ ಬರೀ ರಾಜಕಾರಣದತ್ತ ನೆಟ್ಟಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಬರೀ ರಾಜಕಾರಣ ಮಾಡುತ್ತೀರಿ ಎಂದು ವಾಗ್ದಾಳಿ ಮಾಡಿದರು.
ಟಿಬಿ ಡ್ಯಾಮ್ ಗೇಟ್ ಸರಿಯಾಗಿ ಇದೆಯೋ, ಇಲ್ಲವೋ ಎನ್ನುವುದನ್ನು ನೋಡೋಕೆ ಆಗಿಲ್ಲ ಎಂದು ಅಲ್ಲಿನ ಕಾಂಗ್ರೆಸ್ ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದ್ದಾರೆ. ಕಳೆದ ಆರು ತಿಂಗಳಿನಿಂದ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆ ಖಾಲಿ ಇದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂದರೆ ಕೆಲಸ ಹೇಗೆ ಆಗಬೇಕು ಎಂದು ಅವರ ಪಕ್ಷದ ಸಂಸದರೇ ಪ್ರಶ್ನಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಟೀಕಿಸಿದರು.
ಇದನ್ನೂ ಓದಿ: ಯಾವುದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ: ಸಂಸದ ಶೆಟ್ಟರ್ - Jagadish Shettar