ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಹಾಗೂ ವಾಲ್ಮೀಕಿ ನಿಗಮದಲ್ಲಿನ ಹಗರಣ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದಲ್ಲಿ ಮೊದಲು ಮಂತ್ರಿಯನ್ನು ಬಂಧಿಸಬೇಕು, ಸಿಬಿಐ ತನಿಖೆಯ ಬಳಿಕ ಸಿಎಂ ಇದರಲ್ಲಿ ಹೇಗೆ ಭಾಗಿಯಾಗಿದ್ದಾರೆಂಬ ಸಂಗತಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
"ರಾಜ್ಯ ಕಾಂಗ್ರೆಸ್ ಸರ್ಕಾರದವರು ಸುಳ್ಳು ಹೇಳೋದ್ರಲ್ಲಿ, ದಾರಿ ತಪ್ಪಿಸುವಲ್ಲಿ ನಿಸ್ಸೀಮರು. ಇದೀಗ ವಾಲ್ಮೀಕಿ ಹಗರಣದಲ್ಲಿ ಯಾವುದೇ ಸಂಪರ್ಕವಿಲ್ಲದ 9 ಕಂಪನಿಗಳಿಗೆ ಹಣ ವರ್ಗಾವಣೆ ಆಗಿದೆ. ಇಷ್ಟಾದರೂ ಆರೋಪ ಹೊತ್ತಿರುವ ಸಚಿವನಿಂದ ರಾಜೀನಾಮೆ ಕೊಡಿಸಲು ಆಗುತ್ತಿಲ್ಲ" ಎಂದು ಹರಿಹಾಯ್ದರು.
ಮುಂದುವರೆದು, "ಎಕ್ಸಿಟ್ ಪೋಲ್ಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಜಯಸಾಧಿಸಲಿದೆ ಎನ್ನುವುದು ಬಂದಿದೆ. ಚುನಾವಣೆ ಮೊದಲು, ನಂತರ, ಮಧ್ಯದಲ್ಲಿ ಬಿಜೆಪಿ ಪ್ರಚಂಡವಾದ ಬಹುಮತದೊಂದಿಗೆ ಮೋದಿ ನೇತೃತ್ವದಲ್ಲಿ ನಾವು ಜಯಗಳಿಸಲಿದ್ದೇವೆ ಎಂಬ ಮಾತನ್ನು ಹೇಳಿದ್ದೆ. ಅದರ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದರು. ಇದೀಗ ಹೆಚ್ಚು ಕಡಿಮೆ ಪಕ್ಷದ ನಾಯಕರ ಭವಿಷ್ಯಗಳು ಖಚಿತವಾಗಿವೆ. ಚುನಾವಣೆ ಫಲಿತಾಂಶ ಬಳಿಕ ಎಕ್ಸಿಟ್ ಪೋಲ್ಗಿಂತಲೂ ಬಿಜೆಪಿ 400 ಕ್ಕಿಂತ ಅಧಿಕ ಸೀಟ್ಗಳನ್ನು ಪಡೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೇ, ನೇಹಾ, ಅಂಜಲಿ ರೀತಿಯಲ್ಲಿ ಹತ್ಯೆ ಮಾಡಲಾಗುವುದು ಎಂದು ಶಿಕ್ಷಕಿ ದೀಪಾಗೆ ಬೆದರಿಕೆ ಪತ್ರ ಬಂದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ರಾಜ್ಯ ಸರ್ಕಾರದ ಪೊಲೀಸರಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಜನಪ್ರತಿನಿಧಿಗಳು ಅಂದರೆ ಪೊಲೀಸರಿಗೆ ಭಯವೇ ಇಲ್ಲದಾಗಿದೆ. ಸಿಎಂ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು. ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಇಂತಹ ಘಟನೆಗಳು ನಡೆಯಲು ರಾಜ್ಯ ಸರ್ಕಾರದ ನಡುವಳಿಕೆಯೇ ಕಾರಣ ಎಂದು ದೂರಿದರು.
ಸರ್ಕಾರ ಬಿ. ನಾಗೇಂದ್ರ ರಾಜೀನಾಮೆ ಪಡೆಯಬೇಕು-ಜಗದೀಶ್ ಶೆಟ್ಟರ್: ಹುಬ್ಬಳ್ಳಿ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಒತ್ತಾಯಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರಕ್ಕೆ ನಾಚಿಕೆಯಿಲ್ಲ, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಆಂತರಿಕ ಕಲಹ ಹೊರಗಡೆ ಬರಲಿದೆ. ಈ ವೇಳೆ ಸಿಎಂ, ಡಿಸಿಎಂ ನಡುವಿನ ಕಲಹ ಹೊರಬರುತ್ತದೆ" ಎಂದರು.
"ಕಾಂಗ್ರೆಸ್ನವರ ಅಸಮಾಧಾನದಿಂದ ಸರ್ಕಾರ ಬೀಳುತ್ತದೆ. ಹೀಗಿದ್ದಾಗ ಬಿಜೆಪಿಯವರು ಆಪರೇಷನ್ ಕಮಲ ಮಾಡುವ ಅವಶ್ಯಕತೆಯಿಲ್ಲ. ಯಾಗ ಮಾಡಿಸೋದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಎಕ್ಸಪರ್ಟ್, ಕೇರಳ ಅಲ್ಲ ಭೂಗತದಲ್ಲಿ ಹೋಗಿ ಯಾಗ ಮಾಡಿಸೋ ತಾಕತ್ತು ಡಿಕೆಶಿಗೆ ಇದೆ. ಆದರೆ ಯಾಗದಿಂದ ಒಬ್ಬರಿಗೆ ತೊಂದರೆ ಆಗುತ್ತೆ ಎಂದರೆ ಎಲ್ಲರೂ ಅದನ್ನೇ ಮಾಡುತ್ತಿದ್ದರು. ನಾನು ಬಸವ ತತ್ವದವನು, ಅದರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಈ ಬಗ್ಗೆ ಡಿಕೆಶಿಗೆ ಕೇಳಿ" ಎಂದರು.
ಮುಂದೆ ಚುನಾವಣೆ ಕುರಿತು ಮಾತನಾಡಿದ ಶೆಟ್ಟರ್ "ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಅನ್ನೋದು ಜನರ ಆಶಯವಾಗಿತ್ತು. ಎಕ್ಸಿಟ್ ಪೋಲ್ನಲ್ಲಿ ಸ್ಪಷ್ಟ ಬಹುಮತ ಸಿಕ್ಕಿದೆ. ಹೀಗಾಗಿ ಫಲಿತಾಂಶದಲ್ಲಿ ನಮಗೆ 375 ಆಗಬಹುದು, 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು. ಬೆಳಗಾವಿಯಲ್ಲಿ ಜನರ ಆಶೀರ್ವಾದದಿಂದ ನಾನು ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ" ಎಂಬ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: "ರಾಜ್ಯದಲ್ಲಿರುವ ATM ಸರ್ಕಾರಕ್ಕೆ ನಿಗಮ ಮಂಡಳಿಗಳೇ ATM ಗಳು!": ಆರ್. ಅಶೋಕ್ - R ASHOK