ಚಾಮರಾಜನಗರ: ಹುಲ್ಲಹಳ್ಳಿ ಕಬಿನಿ ನದಿಯ ದಡದಲ್ಲಿರುವ ಜಾಕ್ವೆಲ್ ಮತ್ತು ನೀರು ಶುದ್ಧೀಕರಣ ಘಟಕ ಭಾಗಶಃ ಮುಳುಗಡೆಯಾಗಿರುವ ಕಾರಣ ಗುಂಡ್ಲುಪೇಟೆ ತಾಲೂಕಿನ 145 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಸುಮಾರು 30ರಿಂದ 45 ದಿನಗಳ ಕಾಲ ವ್ಯತ್ಯಯವಾಗಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ತಿಳಿಸಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗುಂಡ್ಲುಪೇಟೆ ತಾಲ್ಲೂಕಿನ 145 ಗ್ರಾಮಗಳಿಗೆ ಕಬಿನಿಯ ನದಿಯಿಂದ ಪಂಪ್ ಮಾಡಿ ಹುಲ್ಲಹಳ್ಳಿ ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಕೇರಳದ ವಯನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಡ್ಯಾಮ್ ನಿಂದ 75 ರಿಂದ 80 ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ಹುಲ್ಲಹಳ್ಳಿ ಕಬಿನಿ ನದಿಯ ದಡದಲ್ಲಿರುವ ಜಾಕ್ ವೆಲ್ ಮತ್ತು ನೀರು ಶುದ್ಧೀಕರಣ ಘಟಕ ಭಾಗಶಃ ಮುಳುಗಡೆಯಾಗಿದೆ. ಈ ಕಾರಣದಿಂದ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗಲಿದೆ.
ಪರ್ಯಾಯವಾಗಿ 145 ಗ್ರಾಮಗಳಲ್ಲಿರುವ ಬೋರ್ ವೆಲ್‍ಗಳನ್ನು ಉಪಯೋಗಿಸಿಕೊಂಡು ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯುವುದು ಹಾಗೂ ನೀರನ್ನು ಮಿತವಾಗಿ ಬಳಸುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಳೆಯ ಆರ್ಭಟ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಈವರೆಗಿನ ಸ್ಥಿತಿಗತಿ ಏನಿದೆ? - KARNATAKA RAIN UPDATE