ಬೆಂಗಳೂರು: "ಬಿಜೆಪಿ, ಜೆಡಿಎಸ್ ಕುಮ್ಮಕ್ಕಿನಿಂದ ಶಾಸಕ ಮುನಿರತ್ನ ಈ ರೀತಿ ಮಾಡಿದಂತೆ ಕಾಣುತ್ತಿದೆ" ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, "ಅವರು ಒಕ್ಕಲಿಗ, ದಲಿತ ಸಮುದಾಯದ ನಿಂದನೆ ಮಾಡಿರುವುದು ಜಗಜ್ಜಾಹೀರಾಗಿದೆ. ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಅವರ ಮಾತಿನ ಧಾಟಿಗೆ ಯಾವುದೇ ಸಂಬಂಧ ಇಲ್ಲ. ಕೆಟ್ಟ, ಅಶ್ಲೀಲ, ಕೀಳಾಗಿ ಅವಹೇಳನ ಮಾಡಿದ್ದಾರೆ. ಇದು ರಾಜಕೀಯಪ್ರೇರಿತವಲ್ಲ. ಬಿಜೆಪಿ, ಜೆಡಿಎಸ್ ಕುಮ್ಮಕ್ಕಿನಿಂದ ಶಾಸಕ ಮುನಿರತ್ನ ಈ ರೀತಿ ಮಾಡಿದಂತೆ ಕಾಣುತ್ತಿದೆ" ಎಂದರು.
"ಒಬ್ಬರಿಂದ ಒಬ್ಬರಿಗೆ HIV ಹರಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ದೊಡ್ಡ ತನಿಖೆಯೇ ಆಗಬೇಕು. ಎಲ್ಲರೂ SIT ರಚನೆಗೆ ಆಗ್ರಹ ಮಾಡಿದ್ದೇವೆ. ಕೇಳದ, ನೋಡದ ಕಾರ್ಯಾಚರಣೆ ಮಾಡಿದ್ದಾರೆ. ಬಯಲಾಜಿಕಲ್ ವಾರ್ ಮಾಡಿದ್ದಾರೆ. ಸಿ.ಟಿ.ರವಿ, ಆರ್.ಅಶೋಕ್, ಕುಮಾರಸ್ವಾಮಿ ಮಾತನಾಡುತ್ತಿಲ್ಲ. ಹಿಂದೆ ನಿಂತು ಬೆಂಬಲ ನೀಡುತ್ತಿದ್ದಾರಾ ನೋಡಬೇಕು. ದಲಿತ, ಒಕ್ಕಲಿಗ ಶ್ರೀಗಳು ನೇತೃತ್ವ ವಹಿಸಬೇಕು. ಅವರ ನೇತೃತ್ವದಲ್ಲಿ ಹೋರಾಟ ನಡೆಯಬೇಕು. ದಾರಿಯಲ್ಲಿ ಹೋಗುವವರೆಲ್ಲಾ ಮಾತನಾಡುತ್ತಾರೆ. ಈ ವಿಚಾರದಲ್ಲಿ ನಿಮ್ಮ ಕಳಕಳಿ ಕೂಡ ಇದೆ. ಯಾವ ಆಯಾಮದಲ್ಲಿ ಹೋಗುತ್ತೋ ಗೊತ್ತಿಲ್ಲ. ನನಗೆ ಡೈಜಸ್ಟ್ ಮಾಡಿಕೊಳ್ಳಲಾಗುತ್ತಿಲ್ಲ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ" ಎಂದರು.
ಹೆಚ್ಡಿಕೆ ಥರ ನಾನು ಲಾಯರ್ ಅಲ್ಲ: ಹೆಚ್ಡಿಕೆ, ಬಿಎಸ್ವೈ ವಿರುದ್ಧ ಡಿನೋಟಿಪಿಕೇಶನ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ಕುಮಾರಸ್ವಾಮಿ ಮರಣ ಹೊಂದಿದ ಅತ್ತೆ ಹೆಸರಿನಲ್ಲಿ ಜಮೀನನ್ನು ಪಡೆದಿದ್ದಾರೆ. ಇದರ ಬಗ್ಗೆ ಕುಮಾರಸ್ವಾಮಿ ಉತ್ತರ ನೀಡಬೇಕು. ಬೇರೆಯವರ ವಿಚಾರದ ಬಗ್ಗೆ ಮಾತನಾಡ್ತಾರೆ. ಈ ಬಗ್ಗೆ ಅವರು ಮಾತನಾಡಲಿ. ಸಂಬಂಧ ಇಲ್ಲ, ಮುಗಿದ ಕಥೆ ಅಂತಾರೆ. ಅವರು ಜನರನ್ನು ಯಾಮಾರಿಸುವುದು ಬೇಡ. ನಾನು ಕುಮಾರಸ್ವಾಮಿ ಥರ ಲಾಯರ್ ಅಲ್ಲ. ಬಣ್ಣ ಬಣ್ಣದ ಕಥೆ ಕಟ್ಟೋಕೂ ಬರಲ್ಲ" ಎಂದು ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ದಾವಣಗೆರೆ ಗಣೇಶ ನಿಮಜ್ಜನೆ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, "ಸರ್ಕಾರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ" ಎಂದರು.
ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ - MLA Muniratna Detained