ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಗಳ ಕೆಲಸದ ಅವಧಿಯನ್ನು 14 ಗಂಟೆಗಳವರೆಗೆ ಹೆಚ್ಚಿಸಲು ರಾಜ್ಯ ಸರ್ಕಾರ ಉದ್ದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿತು. ಸುಮಾರು 500ಕ್ಕೂ ಅಧಿಕ ಉದ್ಯೋಗಿಗಳು ಭಾಗಿಯಾಗಿ, ಆಕ್ರೋಶ ಹೊರಹಾಕಿದರು.
'ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂಬ ಸರ್ಕಾರದ ಕ್ರಮ ಖಂಡನೀಯ', 'ನಾವು ಜೀತದಾಳುಗಳಲ್ಲ' ಎಂಬಂತಹ ಭಿತ್ತಿಪತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಸದ್ಯ ಅಸ್ತಿತ್ವದಲ್ಲಿರುವ ಕರ್ನಾಟಕ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಕಾಯಿದೆಯು ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸವನ್ನು ಅನುಮತಿಸುತ್ತದೆ. ಆದರೆ ಸರ್ಕಾರ ಅನುಷ್ಠಾನಕ್ಕೆ ತರಲು ರೂಪಿಸಿರುವ ತಿದ್ದುಪಡಿ ಹೆಚ್ಚುವರಿ ಸಮಯ ಸೇರಿದಂತೆ, IT/ITES ಕಂಪನಿಗಳಿಗೆ ಸಿಬ್ಬಂದಿಯ ದೈನಂದಿನ ಕೆಲಸದ ಸಮಯವನ್ನು ಅನಿರ್ದಿಷ್ಟವಾಗಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ತಿದ್ದುಪಡಿ ತರಬಾರದು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಮಾತನಾಡಿ, ''ನೂತನ ತಿದ್ದುಪಡಿ ಉದ್ಯೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ ಎಂಬುದನ್ನು ವಿವಿಧ ಅಧ್ಯಯನಗಳು ತೋರಿಸಿವೆ. ಇದು ಕಾರ್ಮಿಕರ ವೈಯಕ್ತಿಕ ಜೀವನದ ಮೂಲಭೂತ ಹಕ್ಕಿನ ಮೇಲಿನ ದಾಳಿ. ಈ ಬದಲಾವಣೆಯನ್ನು ಕಾರ್ಯಗತಗೊಳಿಸಲು ಮಾಡುವ ಯಾವುದೇ ಪ್ರಯತ್ನಗಳನ್ನು ಸಂಘ ವಿರೋಧಿಸುತ್ತದೆ'' ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ: ಸರ್ಕಾರವು ಪ್ರಸ್ತಾವನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ತಿದ್ದುಪಡಿಯೊಂದಿಗೆ ಮುಂದುವರೆದರೆ ಐಟಿ ಮತ್ತು ಐಟಿಇಎಸ್ ವಲಯದ ಉದ್ಯೋಗಿಗಳಿಂದ ಪ್ರಬಲ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ಕರ್ನಾಟಕ ಕಾರ್ಮಿಕ ಇಲಾಖೆ ಎ.ಡಿ.ಎಲ್.ಸಿ ಡಾ.ಜಿ.ಮಂಜುನಾಥ್ ಕೆಐಟಿಯು ನೇತೃತ್ವದ ಮನವಿ ಪತ್ರ ಸ್ವೀಕರಿಸಿದರು.
ರಾಜ್ಯ ಸರ್ಕಾರ ಐಟಿ ಉದ್ಯೋಗಿಗಳ ಕೆಲಸದ ಅವಧಿ ಹೆಚ್ಚಿಸಲು ವಾಣಿಜ್ಯ ಸಂಸ್ಥೆಗಳ ಕಾಯಿದೆ 1961ಕ್ಕೆ ತಿದ್ದುಪಡಿ ಮಾಡಲು ಯೋಜಿಸಿರುವುದು ಉದ್ಯೋಗಿಗಳ ಕೋಪಕ್ಕೆ ಕಾರಣವಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಅವರನ್ನು ಭೇಟಿ ಮಾಡಿದ್ದ ಐಟಿ/ಐಟಿಇಎಸ್ ನೌಕರರ ಸಂಘದ (ಕೆಐಟಿಯು) ಪ್ರತಿನಿಧಿಗಳು ರಾಜ್ಯ ಸರ್ಕಾರದ ಸಂಭಾವ್ಯ ನಿರ್ಧಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ದಿನಕ್ಕೆ 14 ಗಂಟೆ ಕೆಲಸ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದೇನು? - working hours Extension