ಮಂಗಳೂರು: ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ಯಾನ್ ಪಾರ್ಕ್-2024 ಕ್ರಿಕೆಟ್ ಹಬ್ಬಕ್ಕೆ ಮಂಗಳೂರು ಸಜ್ಜಾಗಿದೆ. ಮೇ 4 ಮತ್ತು 5 ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮಕ್ಕಳ ಆಟೋಟ ಸ್ಪರ್ಧೆಗಳೊಂದಿಗೆ ಐಪಿಎಲ್ ಫ್ಯಾನ್ ಪಾರ್ಕ್ ಆಯೋಜಿಸಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ದೇಶದಲ್ಲಿ ಕ್ರಿಕೆಟ್ ಕ್ರೀಡಾಂಗಣ ಇಲ್ಲದ 35 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಆಯೋಜಿಸುತ್ತಿದೆ. ರಾಜ್ಯದ ಮೂರು ನಗರಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಮೈಸೂರು ಮತ್ತು ಬೆಳಗಾವಿಯಲ್ಲಿ ಫ್ಯಾನ್ ಪಾರ್ಕ್ ಮುಗಿದಿದ್ದು, ಇದೀಗ ಮಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ.
ಕರಾವಳಿ ಉತ್ಸವ ಮೈದಾನದಲ್ಲಿ 8 ಅಡಿ ಎತ್ತರ ಮತ್ತು 36 ಅಡಿ ಅಗಲದ ಬೃಹತ್ ಸ್ಕ್ರೀನ್ ಹಾಕಲಾಗಿದೆ. ಕೆಳಗೆ ಮ್ಯಾಟ್ ಹಾಕಿ ಸ್ಟೇಡಿಯಂನಲ್ಲಿ ಕುಳಿತು ಕ್ರಿಕೆಟ್ ವೀಕ್ಷಿಸುವ ಅನುಭವ ಸಿಗಲಿದೆ. ಎಲ್ಲರಿಗೂ ಪ್ರವೇಶ ಉಚಿತವಾಗಿದ್ದು, ಕೈಗೆ ಎಂಟ್ರಿ ಪಾಸ್ ಎಂಬ ಸ್ಟಿಕ್ಕರ್ ಹಾಕಲಾಗುತ್ತದೆ. ಜೊತೆಗೆ ಪ್ರತ್ಯೇಕ ವಿಐಪಿ ಹವಾನಿಯಂತ್ರಕ ಝೋನ್ ಕೂಡ ಇದೆ.
ಮಕ್ಕಳ ಮನೋರಂಜನೆಗಾಗಿ 360 ಡಿಗ್ರಿ ಸೆಲ್ಫಿ ಸ್ಟ್ಯಾಂಡ್, ಫೇಸ್ ಪೇಂಟಿಂಗ್, ಬಂಗಿ ಜಂಪ್, ನೆಟ್ಸ್ ಮತ್ತಿತರ ಆಟೋಟ ಸ್ಪರ್ಧೆ, ಅದೃಷ್ಟವಂತ ಕೂಪನ್ ವಿಜೇತರಿಗೆ ಭಾರತೀಯ ಕ್ರಿಕೆಟಿಗರು ಸಹಿ ಹಾಕಿದ ಜೆರ್ಸಿ ಬಹುಮಾನ ಕೂಡ ಇರಲಿದೆ. ಮೇ 4 ರಂದು ಸಂಜೆ 6.30 ಗಂಟೆಗೆ ಮತ್ತು 5ರಂದು ಮಧ್ಯಾಹ್ನ 2 ಗಂಟೆಗೆ ಗೇಟ್ ತೆರೆಯಲಿದೆ.
ಐಪಿಎಲ್ ಫ್ಯಾನ್ ಪಾರ್ಕ್ ಪೂರ್ಣ ಖರ್ಚನ್ನು ಬಿಸಿಸಿಐ ಭರಿಸಲಿದೆ. ಬಿಸಿಸಿಐ ಪ್ರತಿನಿಧಿಗಳು, ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ. ಕಳೆದ ಬಾರಿ ನೆಹರೂ ಮೈದಾನದಲ್ಲಿ ನಡೆದಾಗ 25 ಸಾವಿರ ಮಂದಿ ಭಾಗವಹಿಸಿದ್ದರು. ಈ ಸಲ 5ರಿಂದ 10 ಸಾವಿರ ಜನರನ್ನು ನಿರೀಕ್ಷಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಇಮ್ಮಿಯಾಝ್ ಹೇಳುತ್ತಾರೆ.
ಕ್ರಿಕೆಟ್ ಟೂರ್ನಿಯನ್ನು ಜಗತ್ತಿನಾದ್ಯಂತ ಮತ್ತು ದೇಶದ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ತರುವ ಉದ್ದೇಶದಿಂದ 2015ರಲ್ಲಿ ಫ್ಯಾನ್ ಪಾರ್ಕ್ ಪರಿಕಲ್ಪನೆ ಜಾರಿಗೆ ತರಲಾಗಿದೆ. ಈ ಬಾರಿ ದೇಶದ 11 ರಾಜ್ಯಗಳಲ್ಲಿ ಪ್ರತಿ ವಾರ ಐದು ಫ್ಯಾನ್ ಪಾರ್ಕ್‌ಗಳು ನಾನಾ ನಗರಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ. ಲೈವ್ ಆ್ಯಕ್ಷನ್ ಮತ್ತು ಸಂಗೀತ, ಮರ್ಚಂಡೈಸ್, ಫುಡ್ ಕೋರ್ಟ್ ಸಹಿತ ಆಟ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಆಯೋಜಕ ಇಮ್ತಿಯಾಝ್ ಮಾತನಾಡಿ, ''ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮೇ 4 ಮತ್ತು 5 ರಂದು ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ - 2024 ಆಯೋಜಿಸಲಾಗಿದೆ. ಬೃಹತ್ ಸ್ಕ್ರೀನ್ ಮೂಲಕ ನೇರ ಕ್ರಿಕೆಟ್ ವೀಕ್ಷಣೆಯ ಅನುಭವ ಸಿಗಲಿದೆ. ವಿಐಪಿ ಹವಾನಿಯಂತ್ರಿತ ಝೋನ್, ಮಕ್ಕಳಿಗೆ ನಾನಾ ಆಟೋಟ ಸ್ಪರ್ಧೆಗಳು ಇರಲಿವೆ'' ಎಂದರು.
ಇದನ್ನೂ ಓದಿ: ರಾಜಸ್ಥಾನ ವಿರುದ್ಧ 1 ರನ್ ರೋಚಕ ಜಯ ದಾಖಲಿಸಿದ ಹೈದರಾಬಾದ್ - RR Vs SRH