ಬೆಂಗಳೂರು: ಜೆಡಿಎಸ್ ಪಕ್ಷದಿಂದ ಉಚ್ಚಾಟಿತ ಹಾಗೂ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪದ ಸಂಬಂಧ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ತನಿಖೆ ಮುಂದುವರೆಯಲಿ ಎಂದು ಹೈಕೋರ್ಟ್ ತಿಳಿಸಿದೆ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ, ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಪ್ರೀತಂಗೌಡ ಪರ ವಕೀಲರು, ''ಅರ್ಜಿಯನ್ನು ದಸರಾ ರಜೆಯ ಬಳಿಕ ವಿಚಾರಣೆಗೆ ತೆಗೆದುಕೊಳ್ಳಬೇಕು. ನಿನ್ನೆ ಪ್ರೀತಂಗೌಡ ವಿಚಾರಣೆಯಲ್ಲಿ ಭಾಗಿಯಾಗಿ, ಎಸ್‌ಐಟಿಯ ಮುಂದೆ ಹೇಳಿಕೆ ದಾಖಲಿಸಿದ್ದಾರೆ'' ಎಂದರು. ಅದಕ್ಕೆ ನ್ಯಾಯಪೀಠವು, ''ವಿಚಾರಣೆ ಮುಂದುವರೆಯಲಿ. ಇಲ್ಲಿಯವರೆಗೆ ತನಿಖೆ ಏನಾಗಿದೆ?'' ಎಂದು ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿತು.
ಈ ಮಧ್ಯೆ, ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್, ''ವಿಡಿಯೋಗಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿದ್ದೇವೆ. ಇದು ಡಿಜಿಟಲ್ ಅಪರಾಧವಾಗಿದೆ'' ಎಂದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜಾಮೀನು, ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ - Prajwal Revanna
ಆಗ ಪೀಠವು, ''ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ನಿಗದಿಗೊಳಿಸಲಾಗಿದೆ. ಅಲ್ಲಿಯವರೆಗೆ ಎಫ್‌ಎಸ್‌ಎಲ್ ವರದಿ ಬರಬಹುದು'' ಎಂದಿತು. ''ಅಲ್ಲದೇ, ತನಿಖೆಗೆ ಹೈಕೋರ್ಟ್ನ ಮತ್ತೊಂದು ಪೀಠ ತಡೆ ನೀಡಿಲ್ಲ. ತನಿಖೆ ಮುಂದುವರಿಯಬೇಕು, ಅದಕ್ಕೆ ಪ್ರೀತಂಗೌಡ ಸಹಕರಿಸಬೇಕು. ಬಂಧನದಿಂದ ರಕ್ಷಣೆ ಮಾಡಿರುವ ಆದೇಶ ಮುಂದವರೆಯಲಿದೆ'' ಎಂದು ಸೂಚನೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಹಾಸನದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಸೇರಿದಂತೆ ಮತ್ತಿತರರ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ವಿಶೇಷ ತನಿಖಾ ದಳದ ತನಿಖೆಗೆ ವಹಿಸಲಾಗಿದೆ. ಇದನ್ನು ರದ್ದುಪಡಿಸುವಂತೆ ಪ್ರೀತಂಗೌಡ ಕೋರಿದ್ದಾರೆ.