ಹುಬ್ಬಳ್ಳಿ (ಧಾರವಾಡ): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರಿಗೆ ಇತ್ತೀಚೆಗೆ ಜಾಮೀನು ಮಂಜೂರಾದ ಹಿನ್ನೆಲೆ, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಇಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರಾದ ಹಿನ್ನೆಲೆ ಹಾಗೂ ಅವರ ಆರೋಗ್ಯ ಚೇತರಿಕೆಗಾಗಿ ನಗರದ ಶ್ರೀ ಸಿದ್ದಾರೂಢ ಸ್ವಾಮೀಜಿ ಸನ್ನಿಧಿಯಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ದರ್ಶನ್ ಆರೋಗ್ಯ ಸುಧಾರಿಸಲಿ ಎಂದು ಪಾರ್ಥಿಸಿದ್ದಾರೆ. ಪೂಜೆ ಬಳಿಕ ದರ್ಶನ್ ಹೆಸರಿನಲ್ಲಿ ಭಕ್ತಾದಿಗಳಿಗೆ ಸಿಹಿ ಹಂಚಿ ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
ಷರತ್ತುಬದ್ಧ ಮಧ್ಯಂತರ ಜಾಮೀನು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಅವರ ಜಾಮೀನಿಗಾಗಿ ಹಲವು ದಿನಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು. ಆರೋಗ್ಯ ತಪಾಸಣೆ, ಚಿಕಿತ್ಸೆ ಹಿನ್ನೆಲೆ ಹೈಕೋರ್ಟ್ ಆರು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನನ್ನು ಅಕ್ಟೋಬರ್ 30ರಂದು ಮಂಜೂರು ಮಾಡಿದೆ. ಇದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ.
ಪ್ರಕರಣವೇನು? ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಮೋರಿವೊಂದರಲ್ಲಿ ಇದೇ ವರ್ಷದ ಜೂ.9ರಂದು ಅಪರಿಚಿತ ವ್ಯಕ್ತಿಯ ಶವ ಪತ್ತೆ ಆಗಿತ್ತು. ಬಳಿಕ ಪ್ರಕರಣದ ತನಿಖೆ ಆರಂಭ ಆಯಿತು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯ್ಕ್ ಕೇಶವಮೂರ್ತಿ ಬಂದು ತಪ್ಪೊಪ್ಪಿಕೊಂಡಿದ್ದರು. ತನಿಖೆ ಮುಂದುವರಿದಂತೆ, ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಹೆಸರು ಪ್ರಸ್ತಾಪವಾಯಿತು. ಆರೋಪಿಗಳು ಈ ಇಬ್ಬರ ಹೆಸರನ್ನು ಪ್ರಸ್ತಾಪ ಮಾಡಿದ ಹಿನ್ನೆಲೆ ಜೂನ್ 11ಕ್ಕೆ ಇವರನ್ನು ಅರೆಸ್ಟ್ ಮಾಡಲಾಯಿತು. ಪವಿತ್ರಾ ಗೌಡ ಅವರಿಗೆ ಮೃತ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎಂಬ ಮಾಹಿತಿ ಹೊರಬಿದ್ದಿತ್ತು. ಸಂಪೂರ್ಣ ತನಿಖೆ ಬಳಿಕ ತೀರ್ಪು ಹೊರಬೀಳಲಿದೆ.
ಇದನ್ನೂ ಓದಿ: ಬಿಗ್ ಬಾಸ್ನಿಂದ ಮಾನಸಾ ಔಟ್: ಮುಖವಾಡ ಕಳಚಿತು ವಿಡಿಯೋ; ಬೆನ್ನಿಂದೆ ಮಾತನಾಡಿದ್ದೆಲ್ಲವೂ ಸ್ಪರ್ಧಿಗಳ ಮುಂದೆ
ಹೆಲ್ತ್ ಅಪ್ಡೇಟ್ಸ್: ಚಿಕಿತ್ಸೆಗಾಗಿ ದರ್ಶನ್ ಶುಕ್ರವಾರ ಕೆಂಗೇರಿಯ ಆಸ್ಪತ್ರೆಗೆ ತೆರಳಿದ್ದಾರೆ. ಅಂದು ಮಾತನಾಡಿದ್ದ ಬಿಜಿಎಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ನವೀನ್, ಬೆನ್ನು ನೋವು ಹಿನ್ನೆಲೆ ದರ್ಶನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಲು ನೋವು, ಎಡಗಾಲು ಸೆಳೆತ ಸಹ ಇದೆ. ರಕ್ತಪರೀಕ್ಷೆ, ಎಂಆರ್ಐ ಸ್ಕ್ಯಾನಿಂಗ್ ಸೇರಿ ಕೆಲ ಟೆಸ್ಟ್ಗಳನ್ನು ಮಾಡುತ್ತಿದ್ದೇವೆ. ಟೆಸ್ಟ್ ರಿಪೋರ್ಟ್ ಆಧಾರದ ಮೇಲೆ ಮುಂದಿನ ಚಿಕಿತ್ಸೆ ಬಗ್ಗೆ ನೋಡುತ್ತೆವೆ. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: 'ಬಘೀರ' ಕಲೆಕ್ಷನ್: ಸಿನಿಪ್ರಿಯರಿಂದ ಶ್ರೀಮುರಳಿ, ರುಕ್ಮಿಣಿ ವಸಂತ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್
ಅಕ್ಟೋಬರ್ 31ರಂದು ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿ ಬೆಂಗಳೂರಿಗೆ ಪಯಣ ಬೆಳೆಸಿದ್ದರು. ಮಾರನೇ ದಿನ ಅವರ ಮನೆ ಬಳಿ ಟೈಟ್ ಸೆಕ್ಯೂರಿಟಿ ಕಂಡುಬಂದಿತು. ಆರ್ಆರ್ ನಗರದ ಮನೆ ಸಮೀಪ ಅವರ ಅಭಿಮಾನಿಗಳು ಬಂದು ಸೇರುವ ಸಾಧ್ಯತೆ ಇರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಟನ ನಿವಾಸದ ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ, ಮನೆಯ ಬಳಿ 2 ಕೆಎಸ್‌ಆರ್‌ಪಿ ತುಕಡಿ, ಸ್ಥಳೀಯ ಪೊಲೀಸರು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.