ಮೈಸೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ತೀವ್ರ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಕೈದಿಗಳ ಬ್ಯಾರಕ್ಗಳಲ್ಲಿ ಸಿಮ್ ಕಾರ್ಡ್, ನಗದು ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿದೆ. ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಮೈಸೂರು ಜಿಲ್ಲಾಡಳಿತ ಸರ್ವ ರೀತಿಯಲ್ಲೂ ಸಿದ್ಧವಾಗುತ್ತಿದೆ. ಈ ಕಡೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಂ. ಮುತ್ತುರಾಜ್ ಹಾಗೂ ಎಸ್. ಜಾಹ್ನವಿ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ಒಳಗೊಂಡ ತಂಡ ಮಂಗಳವಾರ ಮೈಸೂರು ಕೇಂದ್ರ ಕಾರಾಗೃಹಕ್ಕೆ ಹೋಗಿ ತಪಾಸಣೆ ಕೈಗೊಂಡರು.
ಜೈಲಿನ ಎಲ್ಲ ಕೈದಿಗಳನ್ನು ಸಾಲಾಗಿ ನಿಲ್ಲಿಸಿ ಅವರ ಬ್ಯಾರಕ್ಗಳಲ್ಲಿ ಮೊಬೈಲ್ ಫೋನ್ಗಳು, ಸಿಮ್ ಕಾರ್ಡ್ಗಳು, ಶಸ್ತ್ರಾಸ್ತ್ರಗಳು, ಮತ್ತು ಮಾದಕವಸ್ತು ಗಳು, ಸೇರಿದಂತೆ ನಿಷೇಧಿತ ವಸ್ತುಗಳ ಇರುವಿಕೆ ಹಿನ್ನೆಲೆ ಸಂಪೂರ್ಣವಾಗಿ ತಪಾಸಣೆ ನಡೆಸಲಾಯಿತು. ದಾಳಿಯ ವೇಳೆ ಕೈದಿಗಳ ಬ್ಯಾರಕ್ಗಳಲ್ಲಿ ಒಂದು ಸಿಮ್ ಕಾರ್ಡ್, ನಗದು, ಬ್ಲೇಡ್ ಮತ್ತು ಚಾಕು ಪತ್ತೆಯಾಗಿದೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಮಾತನಾಡಿ, ''ಚುನಾವಣೆ ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಚುನಾವಣೆ ವೇಳೆ ಬಂಧನದಲ್ಲಿರುವವರು ಸೇರಿದಂತೆ ಇನ್ನಿತರರು ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸುವ ಸಲುವಾಗಿ ತಪಾಸಣೆ ನಡೆಸಲಾಗಿದೆ'' ಎಂದು ಹೇಳಿದರು.
''ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಜೈಲಿನಲ್ಲಿರುವ ಕೈದಿಗಳು ಹೊರಗಿರುವ ತಮ್ಮ ಬೆಂಬಲಿಗರನ್ನು ಸಂಪರ್ಕಿಸಬಹುದು. ಜೊತೆಗೆ ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸುವಂತೆ ಒತ್ತಡ ಹೇರಬಹುದು. ಇದೇ ಸಂದರ್ಭದಲ್ಲಿ ನಿಷೇಧಿತ ವಸ್ತುಗಳ ಕಳ್ಳಸಾಗಣೆ ಜೈಲಿನಲ್ಲಿ ಆಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ'' ಎಂದು ತಿಳಿಸಿದರು.
ದಾಳಿಯಲ್ಲಿ ಎಸಿಪಿಗಳು, ವಿವಿಧ ಠಾಣೆಯ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳು, ಶ್ವಾನದಳ, ಬೆರಳಚ್ಚು ತಜ್ಞರ ತಂಡ, ಸಿಎಆರ್, ಸಿಟಿ ಕ್ರೈಂ, ಬ್ರಾಂಚ್, ಸ್ಪೆಷಲ್ ಬ್ರಾಂಚ್ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.