ದಾವಣಗೆರೆ: ನಮಗೆ ಕಸ ಹೊಡೆಯಲು ಇಟ್ಟುಕೊಂಡಿದ್ದಾರೆ. ನಾವು ನಮ್ಮ ಪಕ್ಷಕ್ಕೆ ದನ ದುಡಿದಂತೆ ದುಡಿದಿದ್ದೇವೆ. ಆದರೂ ನಮಗೆ ಸೈಡ್ ಲೈನ್ ಮಾಡ್ತಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಆಗಿದೆ ಎಂದು ಹರಿಹರ ಪಂಚಮಸಾಲಿ ಗುರುಪೀಠಾಧ್ಯಕ್ಷ ವಚನಾನಂದ ಶ್ರೀಗಳು ಎಂದು ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಮಠದಲ್ಲಿ ಮಾತನಾಡಿದ ಅವರು, ನಮ್ಮದು ಜನಸಂಖ್ಯೆ 80 ಲಕ್ಷ ಹೊಂದಿರುವ ಸಮುದಾಯ, ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಹೆಚ್ಚು ಹಿಡಿತ ಸಾಧಿಸಿರುವ ಸಮುದಾಯ. ಆದರೆ ನಮ್ಮ ಸಮಾಜಕ್ಕೆ ರಾಜಕೀಯವಾಗಿ ತುಳಿಯುವ ವಾತಾವರಣ ಸೃಷ್ಟಿಯಾಗಿದೆ. ಹದಿನೈದು ದಿನಗಳಿಂದ ಆಕಾಂಕ್ಷಿಗಳು ಕರೆ ಮಾಡಿ, ನಮ್ಮ ಸಮಾಜಕ್ಕೆ ಟಿಕೆಟ್ ಪ್ರಕಟ ಮಾಡಿಲ್ಲ ಎಂದು ದೂರವಾಣಿಯಲ್ಲಿ ಅಳುತ್ತಿದ್ದಾರೆ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳು ನಿರ್ಲಕ್ಷ್ಯ ಮಾಡುತ್ತಿರುವ ಸಿಟ್ಟು ಇದೆ. ಇದರಿಂದ ನಮ್ಮ ಸಂಘ ಹಾಗೂ ಪೀಠದ ಸದಸ್ಯರು ಚರ್ಚೆ ಮಾಡಿದ್ದೇವೆ. ನಮಗೆ ಅನ್ಯಾಯ ಮಾಡಲಾಗಿದೆ. ಎಲ್ಲ ಹಳ್ಳಿಗಳಲ್ಲಿ ಭೇಟಿ ನೀಡಿ ಚಿಂತನ ಮಂಥನ ಮಾಡಿ ಈ ಪಕ್ಷಗಳು ಟಿಕೆಟ್ ಕೊಡಬಹುದಿತ್ತು. ಇನ್ನು ಪಕ್ಷದಲ್ಲಿರುವ ನಮ್ಮ ಸಮಾಜದ ನಿಷ್ಠಾವಂತರಿಗೆ ಟಿಕೆಟ್ ಕೊಡಿ. ಕೆಲ ಪಕ್ಷಗಳು ಅನೇಕ ಕಡೆ ಇದೀಗ ಟಿಕೆಟ್ ಬದಲಾವಣೆ ಮಾಡಿವೆ. ಹಾಗಾಗಿ ಯೋಚನೆ ಮಾಡಿ ಅಧ್ಯಯನ ಮಾಡಿ, ಟಿಕೆಟ್ ಹಂಚಿಕೆ ಮಾಡಿ. ನಮ್ಮ ಸಮುದಾಯದ ನಿಮ್ಮ ಜೊತೆ ಇರುತ್ತೇ. ಇಲ್ಲದಿದ್ದರೆ ಎಲ್ಲ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಬಾಗಲಕೋಟೆ, ಬೆಳಗಾವಿ ಎರಡು ಕಡೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನು ಬಿಜೆಪಿಯಿಂದ ಕೊಪ್ಪಳದಲ್ಲಿ ಒಂದು ಕಡೆ ಮಾತ್ರ ಟಿಕೆಟ್ ಕೊಡಲಾಗಿದೆ. ನಾವು ಚುನಾವಣೆ ಬಹಿಷ್ಕಾರ ಹಾಕುವುದಿಲ್ಲ, ಅದು ನಮ್ಮ ಹಕ್ಕು, ಮತದಾನ ಮಾಡುತ್ತೇವೆ. ಹಳ್ಳಿಗಳಲ್ಲಿ ಚಿಂತನ ಮಂಥನ ಮಾಡಿ ಭಕ್ತರು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರಿಗೆ ಬಾಗಲಕೋಟೆ ಟಿಕೆಟ್ ತಪ್ಪಿಸಿ ಸಂಯುಕ್ತ ಪಾಟೀಲ್ಗೆ ಟಿಕೆಟ್ ಕೊಡಿಸಿರುವುದು ನಮ್ಮ ಕೈವಾಡ ಇಲ್ಲ, ವೀಣಾ ಕಾಶಪ್ಪನವರು, ಸಂಯುಕ್ತ ಪಾಟೀಲ್ ಕೂಡ ನಮ್ಮ ಮಠದ ಭಕ್ತರು ಎಂದು ವಿವರಿಸಿದರು.
ಮಠದ ಆಡಳಿತಾಧಿಕಾರಿ ಹೇಳಿದ್ದಿಷ್ಟು: ಲೋಕಸಭಾ ಚುನಾವಣೆ ಘೋಷಣೆ ಮುನ್ನ ನಮ್ಮ ಸಮಾಜಕ್ಕೆ ಕೇಳಿದಷ್ಟು ಟಿಕೆಟ್ಗಳನ್ನು ಎರಡು ರಾಷ್ಟ್ರೀಯ ಪಕ್ಷಗಳು ನೀಡಿಲ್ಲ ಎಂದು ಮಠದ ಆಡಳಿತಾಧಿಕಾರಿ ರಾಜಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಡೆಯಿಂದ ನಮಗೆ ಬೇಸರ ಇದೆ. ರಾಷ್ಟ್ರೀಯ ಪಕ್ಷಗಳಲ್ಲಿ ಸೇವೆ ಸಲ್ಲಿಸಿದವರಿಗೆ ಟಿಕೆಟ್ ಕೊಡಿ. ದೊಡ್ಡ ಜನಸಂಖ್ಯೆ ಇರುವ ಕ್ಷೇತ್ರಗಳಲ್ಲಿ ಸ್ಥಾನ ಕೊಡದೇ ಇರುವುದು ನೋವಿನ ಸಂಗತಿ. ಇಂದು ಸಭೆ ನಡೆಸಿ ಚರ್ಚೆ ಮಾಡಿದ್ದೇವೆ ಸಂದೇಶ ಕೊಡಲಿದ್ದೇವೆ. ಇದು ಎಂಪಿ ಚುನಾವಣೆಗೆ ಮಾತ್ರ ಸೀಮಿತ ಅಲ್ಲ. ನಮಗೆ ರಾಜಕೀಯದಲ್ಲಿ ಗಾಡ್ ಫಾದರ್ ನಮ್ಮ ಪಂಚಮಸಾಲಿ ಮಠ. ಟಿಕೆಟ್ ನಿರಾಕರಣೆ ವಿಚಾರದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಪಂಚಮಸಾಲಿಗಳು ಖಂಡಿಸಿದ್ದಾರೆ. ಪಕ್ಷದ ನಾಯಕರಿಂದ ನೋವು ಆಗಿದೆ. ನಾವು ಎಲ್ಲರ ಹಕ್ಕು ಕಸಿದುಕೊಳ್ಳಲು ಇಷ್ಟಪಡುವುದಿಲ್ಲ. ಬಣಜಿಗರಿಗೆ 04 ಸ್ಥಾನ, ಸಾದರ ಲಿಂಗಾಯತರಿಗೆ 02 ಸ್ಥಾನ, ಪಂಚಮಸಾಲಿಗೆ ಒಂದು ಸ್ಥಾನ ಕೊಟ್ಟಿದ್ದೀರಿ. ಕಾಂಗ್ರೆಸ್ನಲ್ಲಿ ಎರಡು ಸೀಟ್ ಕೊಟ್ಟಿದ್ದಾರೆ. ಬೇರೆ ಪಂಗಡದವರಿಗೆ ಹೆಚ್ಚು ಸೀಟ್ ಕೊಡಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಕೆಆರ್ಪಿಪಿ ಬಿಜೆಪಿಯೊಂದಿಗೆ ವಿಲೀನ: ಕಲ್ಯಾಣದಲ್ಲಿ ಕಮಲ ಅರಳಿಸಲಿದ್ದಾರಾ ಜನಾರ್ದನ ರೆಡ್ಡಿ? - Lok Sabha Election