ಬೆಂಗಳೂರು: "ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್ ತೂಗುದೀಪ ಅವರಿಗೆ ದೊರೆತಿರುವ ಮಧ್ಯಂತರ ಜಾಮೀನು ತೆರವಿಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
"ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ದೊರೆತಿರುವ ಮಧ್ಯಂತರ ಜಾಮೀನು ತೆರವಿಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದ ಅನುಮತಿ ಕೇಳಲಾಗಿತ್ತು. ಸರ್ಕಾರದಿಂದ ಅನುಮತಿ ದೊರೆತಿದ್ದು, ಸದ್ಯದಲ್ಲೇ ಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು" ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಡಿ ಬಂಧನಕ್ಕೊಳಗಾಗಿದ್ದ ದರ್ಶನ್ ಅವರ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್ ಅವರು ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 22ರಂದು ಹೈಕೋರ್ಟ್ ಅರ್ಜಿಯ ವಿಚಾರಣೆ ನಡೆಸಿತ್ತು.
ಈ ವೇಳೆ ದರ್ಶನ್ ಪರ ವಕೀಲರು, ಅರ್ಜಿದಾರ ದರ್ಶನ್ ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದಾರೆ. ವಿಮ್ಸ್ ಆಸ್ಪತ್ರೆಗೆ ನಿನ್ನೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನ್ ಮಾಡಿಸಲಾಗಿದೆ. ಬೆನ್ನು ಹುರಿಯ ಸರ್ಜರಿ ಅಗತ್ಯವೆಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಅನಾರೋಗ್ಯ ಕಾರಣಕ್ಕೆ ಜಾಮೀನು ಕೇಳುತ್ತಿದ್ದೇವೆ ಎಂದು ಮನವಿ ಮಾಡಿದ್ದರು. ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ದರ್ಶನ್ ಅವರ ವೈದ್ಯಕೀಯ ವರದಿ ನೀಡುವಂತೆ ಮತ್ತು ಅರ್ಜಿಯ ಕುರಿತಂತೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ಅವರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತ್ತು.
ಅಕ್ಟೋಬರ್ 30ರಂದು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ನಟ ದರ್ಶನ್ ಆರೋಗ್ಯ ತಪಾಸಣೆಗಾಗಿ ಹೈಕೋರ್ಟ್ ಆರು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಅರ್ಜಿಯಲ್ಲಿ ಆರೋಗ್ಯ ತಪಾಸಣೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಎಂಟು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು.
ಇದನ್ನೂ ಓದಿ: ದರ್ಶನ್ ಜತೆ ಜೈಲಲ್ಲಿ ಟೀ ಕುಡಿದ ನಾಗನ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್