ಮಂಗಳೂರು: "ಭಾರತದಲ್ಲೇ ಮೊತ್ತಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್-ಅಪ್ ಪೆಡ್ಲಿಂಗ್ ಸ್ಪರ್ಧೆ ಮಂಗಳೂರಿನ ಸಸಿಹಿತ್ಲು ಬೀಚ್ನಲ್ಲಿ ಶುಕ್ರವಾರದಿಂದ ಮಾರ್ಚ್ 10ರವರೆಗೆ 3 ದಿನಗಳ ಕಾಲ ನಡೆಯಲಿದೆ" ಎಂದು ಮಂತ್ರ ಸರ್ಫಿಂಗ್ ಕ್ಲಬ್ ಸಹ ಸದಸ್ಯ ಕಿಶೋರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪುರುಷರು ಮತ್ತು ಮಹಿಳೆಯರ ಮತ್ತು ಜೂನಿಯರ್ ಚಾಂಪಿಯನ್ ಜೊತೆಗೆ ಅಗ್ರ ಶ್ರೇಯಾಂಕದ ಅಂತಾರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪೆಡ್ಲರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪುರುಷರ ಓಪನ್, ಮಹಿಳೆಯರ ಓಪನ್, ಜೂನಿಯರ್ ಹುಡುಗ ಮತ್ತು ಹುಡುಗಿಯರು ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿರುವ ಮೂರು ದಿನಗಳ ಸ್ಟ್ಯಾಂಡ್-ಅಪ್ ಪೆಡ್ಲಿಂಗ್ ಉತ್ಸವ ಅಸೋಸಿಯೇಷನ್ ಆಫ್ ಪ್ಯಾಡಲ್‌ಸರ್ಫ್ ಪ್ರೊಫೆಷನಲ್ಸ್ ವರ್ಲ್ಡ್ ಟೂರ್‌ನೊಂದಿಗೆ (APP) ಆಯೋಜನೆಗೊಳ್ಳುತ್ತಿದೆ" ಎಂದರು.
ದೇಶ-ವಿದೇಶದ ಸ್ಪರ್ಧಿಗಳು ಭಾಗಿ: ಭಾರತದ ಬಿಹಾರ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಸ್ಪರ್ಧಿಗಳು ಸೇರಿದಂತೆ ಸ್ಪೇನ್, ಥಾಯ್ಲೆಂಡ್, ಇಂಡೋನೇಷ್ಯಾ ದೇಶದ ಸ್ಪರ್ಧಿಗಳು ಭಾಗವಹಿಸುವರು. ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 3 ಗಂಟೆಯ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ರೇಸ್ ನಡೆಯಲಿದೆ. ಅಲ್ಲದೆ ಪ್ರತೀ ದಿನ ಸಂಜೆಯ ಬಳಿಕ ಚಲನಚಿತ್ರೋತ್ಸವದ ಭಾಗವಾಗಿ ಅಡ್ವೆಂಚರ್ ಮಾದರಿಯ ಸಿನಿಮಾಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಂಗಳೂರು: ಮಾ.8ರಿಂದ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲ್ ಸರ್ಫಿಂಗ್ ಸ್ಪರ್ಧೆ