ಹುಬ್ಬಳ್ಳಿ: ಕಲಬುರಗಿ-ಬೆಂಗಳೂರು, ಮೈಸೂರು-ಚೆನ್ನೈ ಸೇರಿ ದೇಶಾದ್ಯಂತ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಜೊತೆಗೆ 85 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳ ಶಂಕುಸ್ಥಾಪನೆಯನ್ನು ವರ್ಚುವಲ್ ಮೂಲಕ ನೆರವೇರಿಸಿದರು. ರಾಜಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಹುಬ್ಬಳ್ಳಿ ರೈಲು ನಿಲ್ದಾಣದಿಂದ ವರ್ಚವಲ್ ಮೂಲಕ ಭಾಗವಹಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ''ದೇಶದ ನಿರಂತರ ಅಭಿವೃದ್ಧಿಯಲ್ಲಿ, ಸುಗಮ ಮತ್ತು ಸಮನ್ವಯ ರೈಲ್ವೆಗಳು ಸಾರಿಗೆ ವ್ಯವಸ್ಥೆಯು ಪ್ರಮುಖ ಕೊಡುಗೆಯನ್ನು ಹೊಂದಿದೆ. ದೇಶದಲ್ಲಿ ಭಾರತೀಯ ರೈಲ್ವೆ ಮುಖ್ಯ ಸಾರಿಗೆ ವಿಧಾನವಾಗಿದೆ. ಇದು ದೇಶದ ಆರ್ಥಿಕ ಮತ್ತು ಸರ್ವತೋಮುಖ ಅಭಿವೃದ್ಧಿಯ ಬೆನ್ನೆಲುಬಾಗಿದೆ'' ಎಂದರು.
''ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತು 85 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳನ್ನು ದೇಶವಾಸಿಗಳಿಗೆ ಅರ್ಪಿಸಿರುವುದು ಸಂತಸ ತಂದಿದೆ'' ಎಂದು ಹರ್ಷ ವ್ಯಕ್ತಪಡಿಸಿದರು.
''ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ, ಹೊಸ ರೈಲು ಮಾರ್ಗ, ಗತಿಶಕ್ತಿ ಮಲ್ಟಿ ಕಾರ್ಗೋ ಟರ್ಮಿನಲ್, ಗೂಡ್ಸ್ ಶೆಡ್, ಒಂದು ನಿಲ್ದಾಣ ಒಂದು ಉತ್ಪನ್ನ ಸ್ಟಾಲ್ ಮತ್ತು ಜನೌಷಧಿ ಕೇಂದ್ರವನ್ನು ದೇಶವಾಸಿಗಳಿಗೆ ಸಮರ್ಪಿಸಲಾಗುವುದು ಹಾಗೂ ಬೆಂಗಳೂರಿಗೆ ಸ್ಲೀಪರ್ ರೈಲು ನಿರ್ವಹಣೆ ಮತ್ತು ವರ್ಕ್‌ಶಾಪ್ ಡಿಪೋವನ್ನು ಉಡುಗೊರೆಯಾಗಿ ನೀಡಲಿದೆ'' ಎಂದು ಮಾಹಿತಿ ನೀಡಿದರು.
ಅಮೃತ್ ಭಾರತ್ ಸ್ಟೇಷನ್ ಸ್ಕೀಮ್: ''ಫೆಬ್ರವರಿ 26 ರಂದು ಪ್ರಧಾನ ಮಂತ್ರಿಗಳು 41 ಸಾವಿರ ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳನ್ನು ದೇಶವಾಸಿಗಳಿಗೆ ಅರ್ಪಿಸಿದ್ದರು. ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಅಡಿಯಲ್ಲಿ ದೇಶಾದ್ಯಂತ 554 ನಿಲ್ದಾಣಗಳು, ರೈಲ್ವೆ ನಿಲ್ದಾಣ ಮತ್ತು 1,500 ROB/ಅಂಡರ್ ಪಾಸ್ ಮತ್ತು ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಈ ಕಾಮಗಾರಿಗಳಲ್ಲಿ, ನೈಋತ್ಯ ರೈಲ್ವೆ ವಲಯದ ಅಡಿಯಲ್ಲಿ 34 ರೈಲು ನಿಲ್ದಾಣಗಳು ಮತ್ತು 30 ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣದ ಕೆಲಸವನ್ನು 1192.86 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ'' ಎಂದು ತಿಳಿಸಿದರು.
ರೈಲು ನಿಲ್ದಾಣಗಳ ಪುನರಾಭಿವೃದ್ಧಿ, ಆಧುನೀಕರಣ: ''ಬೆಂಗಳೂರು ವಿಭಾಗದ 15 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣಕ್ಕೆ 326 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ ರೈಲ್ವೆ ಸಚಿವಾಲಯ ಮೂಲಕ ಪ್ರಯಾಣಿಕರಿಗೆ ಉತ್ತಮ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸುವುದು. ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಮತ್ತು ಆಧುನೀಕರಣ ಕಾರ್ಯ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕ್ರಮ ಕೈಗೊಳ್ಳಲಾಗಿದೆ. ಇದು ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ'' ಎಂದು ಹೇಳಿದರು.
ಕರ್ನಾಟಕದಲ್ಲಿ 31 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ: ''ಸ್ವಾವಲಂಬಿ ಭಾರತ ಅಭಿಯಾನದ ಮೂಲಕ ರೈಲ್ವೆಯ ಹಲವು ಪ್ರಮುಖ ಮೂಲಸೌಕರ್ಯ ಮತ್ತು ಉತ್ಪಾದನಾ ಯೋಜನೆಗಳನ್ನು ಆರಂಭಿಸಲಾಗಿದೆ. ಇದರಲ್ಲಿ ವಂದೇ ಭಾರತ್ ರೈಲುಗಳ ಸ್ವದೇಶಿ ತಯಾರಿಕಾ ಕೆಲಸ ಪ್ರಮುಖವಾಗಿದೆ. ಇದರೊಂದಿಗೆ, ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಮತ್ತು ಬುಲೆಟ್ ಟ್ರೈನ್ (ಅಹಮದಾಬಾದ್- ಮುಂಬೈ)ನಲ್ಲಿ ತ್ವರಿತವಾಗಿ ಕೆಲಸ ಮಾಡಲಾಗುತ್ತಿದೆ. ಅಮೃತ್ ಕರೆಯಲ್ಲಿ ಪ್ರಯಾಣಿಕರ ಸೌಲಭ್ಯಗಳು ಮತ್ತು ಮೇಲ್ದರ್ಜೆಗೇರಿದ ರೈಲು ನಿಲ್ದಾಣಗಳಲ್ಲಿ ಗಮನಾರ್ಹ ಹೆಚ್ಚಳವು ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಸುಲಭಗೊಳಿಸುತ್ತದೆ. 656.43 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕದಲ್ಲಿ 31 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಅಡಿಯಲ್ಲಿ, 24 ROB/RUB ಗಳನ್ನು 330.62 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು'' ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ: ''ಪ್ರಸ್ತುತ ರಾಜ್ಯದಲ್ಲಿ 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡುತ್ತಿವೆ. ಈ ದಿನ ಕರ್ನಾಟಕ ರಾಜ್ಯಕ್ಕೆ ಮತ್ತೆರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉಡುಗೊರೆಯಾಗಿ ನೀಡಲಾಗುತ್ತಿರುವುದು ಪ್ರಶಂಸನೀಯ. ಕರ್ನಾಟಕದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅನ್ನು ಮಾಲ್ಡಾ ಟೌನ್- ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಚಾಲನೆ ನೀಡಲಾಯಿತು. ನೈಋತ್ಯ ರೈಲ್ವೆಯಲ್ಲಿನ 85 ಪ್ರತಿಶತಕ್ಕೂ ಹೆಚ್ಚು ರೈಲು ಜಾಲವು ವಿದ್ಯುದೀಕರಣಗೊಂಡಿದೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಸ್ಟೇಷನ್ ಭಾರತದಲ್ಲಿ ಮೊದಲ ಹವಾನಿಯಂತ್ರಿತ ನಿಲ್ದಾಣವಾಗಿದ್ದು, ವಿಮಾನ ನಿಲ್ದಾಣದಂತಹ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ನಿರ್ಮಿಸಲಾಗಿದೆ. ಎಲ್ಲಾ ಪ್ರಮುಖ ಮಾರ್ಗಗಳ ಡಬ್ಲಿಂಗ್ ಮತ್ತು ವಿದ್ಯುದೀಕರಣ ಪೂರ್ಣಗೊಂಡಿದೆ. ಲಭ್ಯತೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಪುನರಾಭಿವೃದ್ಧಿ ಯೋಜನೆಯ ಮೂಲಕ ವೈಟ್‌ಫೀಲ್ಡ್ ನಿಲ್ದಾಣವನ್ನು ಆಧುನಿಕ ಮತ್ತು ಅಂತರ್ಗತ ಸಾರಿಗೆ ಕೇಂದ್ರವಾಗಿ ಪರಿವರ್ತಿಸಲು ಮಹತ್ವದ ಕೆಲಸವನ್ನು ಮಾಡಲಾಗುತ್ತಿದೆ'' ಎಂದು ತಿಳಿಸಿದರು.
''ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಎಲ್ಲಾ ಅನುಕೂಲಕರ ರೈಲು ಸೌಲಭ್ಯಗಳನ್ನು ಒದಗಿಸುವ ದಿಕ್ಕಿನಲ್ಲಿ ಬಹಳಷ್ಟು ಕೆಲಸ ಮಾಡಿದೆ. ರೈಲ್ವೆ ವ್ಯವಸ್ಥೆಗಳ ಆಧುನೀಕರಣ, ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯಗಳ ಜೊತೆಗೆ ಮಾಲಿನ್ಯ ಮುಕ್ತ ರೈಲು ಮತ್ತು ಸರಕು ಸಾಗಣೆಯ ಅತ್ಯುತ್ತಮವಾದ ಒದಗಿಸುವಿಕೆ. ಕಳೆದ 8ರಿಂದ 10 ವರ್ಷಗಳಲ್ಲಿ, ಭಾರತೀಯ ರೈಲ್ವೆ ಪ್ರತಿಯೊಂದು ಕ್ಷೇತ್ರದಲ್ಲೂ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದಿದ್ದು, ಸುಲಭ ಸಾರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ'' ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕ ಮಹೇಶ ಟೆಂಗಿನಕಾಯಿ, ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ್, ಮಾಡೆಲ್ ಮ್ಯಾನೇಜರ್ ಹರ್ಷಾ ಖರೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕಲಬುರಗಿ-ಬೆಂಗಳೂರು, ಮೈಸೂರು-ಚೆನ್ನೈ, ತಿರುವನಂತಪುರ-ಮಂಗಳೂರು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ