ಹುಬ್ಬಳ್ಳಿ: ಇಲ್ಲಿನ ಉಪ ಕಾರಾಗೃಹದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ನಾಲ್ಕು ಬ್ಯಾರಕ್‌ಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ಎಫ್. ದೊಡಮನಿ, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಯಮನಪ್ಪ ಕರೆಹನುಮಂತಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಾಗೇಶ ನಾಯ್ಕ ಅವರು ಹೊಸದಾಗಿ ನಿರ್ಮಾಣವಾಗಿರುವ 4 ಬ್ಯಾರಕ್‌ಗಳ ಉದ್ಘಾಟನೆಯನ್ನು ನೆರವೇರಿಸಿದರು.
ಈ ಮೊದಲು ಕಾರಾಗೃಹದ ಅಧಿಕೃತ ಸಾಮರ್ಥ್ಯ 105 ಜನ (97 ಪುರುಷ+08ಮಹಿಳಾ) ಇತ್ತು. ಈಗ ನಾಲ್ಕು ಹೊಸ ಬ್ಯಾರಕ್‌ಗಳು ಉಪಯೋಗಕ್ಕೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕಾರಾಗೃಹದ ಬಂಧಿಗಳನ್ನು ಇಡುವ ಅಧಿಕೃತ ಸಾಮರ್ಥ್ಯವು 177 ಪುರುಷ ಮತ್ತು 8 ಮಹಿಳಾ ಬಂಧಿಗಳು ಸೇರಿ ಒಟ್ಟು 185ಕ್ಕೆ ಏರಿಕೆಯಾಗಿದೆ.
ನಂತರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ಎಫ್. ದೊಡಮನಿ, ಬಂಧಿಗಳ ಕುಂದು ಕೊರತೆಗಳನ್ನು ವಿಚಾರಿಸಿ, ಬಂಧಿಗಳಿಗೆ ಉಚಿತ ಕಾನೂನಿನ ನೆರವಿನ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಕಾರಾಗೃಹದ ಅಧೀಕ್ಷಕರಾದ ಶಹಾಬುದ್ದೀನ್ ಕಾಲೇಖಾನ್, ಇತರರು ಉಪಸ್ಥಿತರಿದ್ದರು.