ಬೆಂಗಳೂರು: ಬಿಸಿಲ ಬೇಗೆಗೆ ತತ್ತರಿಸಿದ್ದ ರಾಜ್ಯ ರಾಜಧಾನಿಯ ಜನರು ಸೋಮವಾರ ಸುರಿದ ಉತ್ತಮ ಮಳೆಯಿಂದ ನಿಟ್ಟುಸಿರು ಬಿಟ್ಟರು. ಮಳೆಯ ವಾತಾವರಣ ಇನ್ನೊಂದು ವಾರ ಅಂದರೆ ಮೇ 13ರವರೆಗೂ ಮುಂದುವರೆಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಾರಿ ಅಧಿಕ ತಾಪಮಾನದಿಂದ ದಾಖಲೆ ಸೃಷ್ಟಿಸಿದ್ದ ಬೆಂಗಳೂರಿನಲ್ಲಿ ಸೋಮವಾರ ಸುರಿದ ಆಲಿಕಲ್ಲು ಮಳೆ ಜನರಲ್ಲಿ ಹರ್ಷ ಮೂಡಿಸಿತ್ತು. ಇಂದು ಸಂಜೆಯೂ ಕೂಡ ರಾಜ್ಯ ರಾಜಧಾನಿ ಸೇರಿದಂತೆ ಕರಾವಳಿ, ಮಲೆನಾಡು, ಬಯಲು ಸೀಮೆಯ ಹಲವೆಡೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ಸಂಜೆ ಬಳಿಕ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮಾತ್ರವಲ್ಲದೆ, ಬೆಂಗಳೂರು ಗ್ರಾ, ರಾಮನಗರ, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಹಳೆ ಮೈಸೂರು ಭಾಗದ ಹಲವೆಡೆ ಮಳೆ ಬೀಳಲಿದೆ. ಗಡಿ ಜಿಲ್ಲೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಬಯಲು ಸೀಮೆಯ ವಿಜಯನಗರ ಮತ್ತು ಸುತ್ತಮುತ್ತ ಮೇ 13ರವರೆಗೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸಂಜೆ ಆರಂಭವಾದ ಗುಡುಗುಸಹಿತ ಮಳೆ ತಡರಾತ್ರಿವರೆಗೂ ಸುರಿಯಿತು. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಹೈರಾಣಾದರು. ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ನಿರ್ಮಾಣ ಹಂತದ ಕಟ್ಟಡ ಕುಸಿದು ಬಾಲಕಿ ಗಾಯಗೊಂಡಳು. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಜನರು ಸಮಸ್ಯೆಗೊಳಗಾದರು. ನಗರದಲ್ಲಿ ನಿನ್ನೆ ಒಟ್ಟಾರೆ 10.5 ಮಿ.ಮೀ ಮಳೆಯಾಗಿದೆ. ಬೊಮ್ಮನಹಳ್ಳಿಯಲ್ಲಿ 30 ಮಿ.ಮೀ, ಬಿಟಿಎಂ ಲೇಔಟ್ 30 ಮಿ.ಮೀ, ಕೋಣನಕುಂಟೆ 27 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 28 ಮಿ.ಮೀ, ಯಲಹಂಕ 25 ಮಿ.ಮೀ, ಹೊರಮಾವು 40 ಮಿ.ಮೀ, ಬಾಗಲಗುಂಟೆ 43 ಮಿ.ಮೀ ಮಳೆ ಬಿದ್ದಿದೆ.
"ಮುಂದಿನ ಐದು ದಿನಗಳ ಕಾಲ ಮಳೆ ಪರಿಸ್ಥಿತಿ ಮುಂದುವರೆಯುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಭವನೀಯ ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳು/ಇಂಜಿನಿಯರ್ಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸಬೇಕು. ಅವರ ಸುರಕ್ಷತೆ ಬಗ್ಗೆ ಸಿಬ್ಬಂದಿ ಗಮನ ಹರಿಸಬೇಕು. ಸಹಾಯವಾಣಿ ಕೇಂದ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸದಾ ಜಾಗರೂಕರಾಗಿರಬೇಕು" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಇಡೀ ರಾತ್ರಿ ಸುರಿದ ಮಳೆಗೆ ರಾಜಧಾನಿ ಹೈರಾಣ: ಕೆರೆಯಂತಾದ ರಸ್ತೆಗಳು; ಇನ್ನೂ ಮೂರು ದಿನ ಮುಂದುವರಿಯಲಿದೆ ವರುಣಾರ್ಭಟ