ಹುಬ್ಬಳ್ಳಿ: ''ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ದಮನಕಾರಿ ಆಡಳಿತ ನಡೆಯುತ್ತಿದೆ. ಅವರ ಬದಲಾವಣೆಗೆ ಕೊಟ್ಟ ಸಮಯ ಮುಗಿದಿದೆ. ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜೋಶಿ ಅವರನ್ನು ಸೋಲಿಸುವುದೇ ನಮ್ಮ ಗುರಿ'' ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಇಂದು (ಭಾನುವಾರ) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲಿಂಗಾಯತ ಸಮುದಾಯ ಸೇರಿದಂತೆ ಇತರ ಸಮುದಾಯಕ್ಕೂ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಅವರನ್ನು ಮಾ.31ರೊಳಗೆ ಬದಲಾವಣೆ ಮಾಡಬೇಕು ಎಂದು ಗಡುವು ನೀಡಿದ್ದೇವೆ. ಆ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಲಿಂಗಾಯತ ಸಮುದಾಯದ ನಾಯಕನನ್ನು ನಿಲ್ಲಿಸಿ ಗೆಲ್ಲಿಸಬೇಕು'' ಎಂದರು.
ಮುಂದಿನ ನಿರ್ಧಾರ ಬಗ್ಗೆ ಚರ್ಚಿಸಲು ಏ.2ಕ್ಕೆ ಧಾರವಾಡದಲ್ಲಿ ಸಭೆ: ''ಕ್ಷೇತ್ರದಲ್ಲಿ ಪ್ರಜಾಸತ್ತೆ ಸತ್ತು ಹೋಗಿದೆ. ಇಲ್ಲಿ ರಾಜಸತ್ತೆ ಅಳ್ವಿಕೆ ನಡೆದಿದೆ. ಒಬ್ಬ ಸನ್ಯಾಸಿ ಏನಾದ್ರೂ ಮಾಡಬಲ್ಲ. ಅವರನ್ನು ದಮನ ಮಾಡಲು ನಾನೊಬ್ಬ ಸಾಕು'' ಎಂದು ಸ್ವಾಮೀಜಿ ಕಿಡಿಕಾರಿದರು.
ಇದೇ ವೇಳೆ, ಮುಂದಿನ ನಿರ್ಧಾರವನ್ನು ಚರ್ಚಿಸಲು ಏ.2ರಂದು ಧಾರವಾಡದಲ್ಲಿ ಭಕ್ತರ ಸಭೆ ಕರೆಯಲಾಗಿದೆ. ಅಂದು ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ನಮ್ಮ ನಡೆ ಇರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಅಣ್ಣಸಾಹೇಬ ಗ್ರಾಮಗಳ ಅಭಿವೃದ್ಧಿ ಮಾಡಿದ್ದಾರೆಂದು ಯಾರಾದರೂ ತಿಳಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ' - MLA Raju Kage