ಬೆಂಗಳೂರು: ನಗರದಲ್ಲಿ ಅಂತರ್ಜಲ ಮಟ್ಟದ ತೀವ್ರ ಕುಸಿತ ಹಾಗೂ ಹಲವು ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನೀರಿನ ಅಭಾವ ಎದುರಾಗಿದೆ. ಇದಕ್ಕೆ ಹಲವು ಅಕ್ರಮ ಬಡಾವಣೆಗಳ ನಿರ್ಮಾಣ ಹಾಗೂ ಬೋರ್‌ವೆಲ್‌ಗಳ ಕೊರೆಯುವಿಕೆಯೇ ಪ್ರಮುಖ ಕಾರಣ ಎಂದು ಸ್ಥಳೀಯರು ಹಾಗೂ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಲಮಂಡಳಿಯಿಂದ ನೀರಿನ ಸಂಪರ್ಕ ಹೊಂದಿರುವ ವೈಟ್ ಫೀಲ್ಡ್‌ನ ಮನೆಗಳು ಮತ್ತು ಅಪಾರ್ಟ್‌ಮೆಂಟ್ ಸಂಕೀರ್ಣಗಳಿಗೆ ಹದಿನೈದು ಅಥವಾ ತಿಂಗಳಿಗೊಮ್ಮೆ ನೀರು ಒದಗಿಸಲಾಗುತ್ತಿದೆ. ಕೆ.ಆರ್.ಪುರ, ಹೊರಮಾವು, ವೈಟ್ ಫೀಲ್ಡ್, ವರ್ತೂರು, ಬೆಳ್ಳಂದೂರು, ಮಾರತ್ತಹಳ್ಳಿ, ಹೂಡಿ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೇಳತೀರದಾಗಿದೆ.
''ಹೊರರಾಜ್ಯದ ಬಿಲ್ಡರ್‌ಗಳು ಹೆಚ್ಚಿನ ಅಕ್ರಮ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಬೋರ್‌ವೆಲ್ ಕೊರೆಯಲು ಅನುಮತಿ ಕಡ್ಡಾಯವಾಗಿದ್ದರೂ ಅಕ್ರಮವಾಗಿ ಕೊರೆಯುತ್ತಿದ್ದಾರೆ. ಜನಸಾಮಾನ್ಯರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೂ, ಬೋರ್‌ವೆಲ್ ನೀರನ್ನು ನಿರ್ಮಾಣ ಕಾರ್ಯಕ್ಕೆ ಬಳಸುವುದಕ್ಕೆ ನಿಷೇಧವಿದ್ದರೂ ಬಳಕೆ ಮಾಡುತ್ತಿದ್ದಾರೆ'' ಎಂದು ಪರಿಸರ ಹೋರಾಟಗಾರರೊಬ್ಬರು ಹೇಳಿದರು.
''ಮನೆ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಕೊಡುವುದಾಗಿ ಭರವಸೆ ನೀಡಲಾಗಿತ್ತು. ಇದಕ್ಕಾಗಿ ಮಂಡಳಿಯು ಹೊರಮಾವು ಮತ್ತು ರಾಮಮೂರ್ತಿನಗರದ ನಿವಾಸಿಗಳಿಂದ ಶುಲ್ಕ ಸಂಗ್ರಹಿಸಿದ್ದಾರೆ. ಆದರೆ, ಪ್ರತೀ ಬಾರಿಯೂ ಯೋಜನೆಯ ಗಡುವು ಮುಂದಕ್ಕೆೆ ಹೋಗುತ್ತಲೇ ಇದೆ'' ಎಂದು ಬೇಸರ ಹೊರಹಾಕಿದರು.
ಜಲಮಂಡಳಿ ಅಧಿಕಾರಿಗಳು ಹೇಳುವುದೇನು?: ನೀರಿನ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ಜಲಮಂಡಳಿ ಅಧಿಕಾರಿಗಳು, "ಜುಲೈವರೆಗೆ ಪೂರೈಕೆ ಮಾಡುವಷ್ಟು ನೀರು ಜಲಾಶಯಗಳಲ್ಲಿದೆ. ಈ ಬಗ್ಗೆೆ ಈಗಾಗಲೇ ಮಾಹಿತಿ ನೀಡಲಾಗಿದೆ. ಖಾಸಗಿ ನೀರಿನ ಟ್ಯಾಂಕರ್‌ಗಳ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ನೀರಿನ ಟ್ಯಾಂಕರ್ ಬೆಲೆಗೆ ಮಿತಿ ನಿಗದಿಪಡಿಸಿದೆ. ಸಾರ್ವಜನಿಕರು ಆದಷ್ಟು ಮಿತವಾಗಿ ನೀರು ಬಳಕೆ ಮಾಡಬೇಕು'' ಎಂದು ಮನವಿ ಮಾಡಿದರು.
''ನಗರದ ಸಂಪನ್ಮೂಲಗಳನ್ನು ಮೀರಿದ ಯೋಜಿತವಲ್ಲದ ಅಭಿವೃದ್ಧಿಗೆ ಅವಕಾಶ ಮಾಡಿಕೊಡಲಾಗಿದೆ. ಅವ್ಯಾಹತವಾಗಿ ನಡೆಯುತ್ತಿರುವ ಟ್ಯಾಂಕರ್ ಮಾಫಿಯಾ, ಅಂತರ್ಜಲ ಕಳ್ಳತನ ಮತ್ತು ಅನಧಿಕೃತ ಬೋರ್‌ವೆಲ್‌ಗಳನ್ನು ಕೊರೆದು ನಿರ್ಮಾಣ ಚಟುವಟಿಕೆ ಮತ್ತು ವಾಣಿಜ್ಯ ಬಳಕೆಗೆ ಬಳಸುತ್ತಿರುವ ಅಕ್ರಮ ಪಿಜಿ ಕಟ್ಟಡಗಳಿಂದಾಗಿ ಸಾರ್ವಜನಿಕ ಬೋರ್‌ವೆಲ್‌ಗಳು ಬತ್ತಿಹೋಗಿ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪಿಜಿ ಕಟ್ಟಡ ಮಾಲೀಕರು ಜಲಮಂಡಳಿ ಸಿಬ್ಬಂದಿಗೆ ಲಂಚ ನೀಡಿ ಮೀಟರ್ ಇಲ್ಲದ ಅಕ್ರಮ ನೀರಿನ ಸಂಪರ್ಕ ಪಡೆದು ಸಾರ್ವಜನಿಕರಿಂದ ನೀರು ದೋಚುತ್ತಿದ್ದಾರೆ'' ಎಂದು ಸಿಟಿಜನ್ಸ್ ಅಜೆಂಡಾ ಫಾರ್ ಬೆಂಗಳೂರು ಕನ್ವೀನರ್ ಸಂದೀಪ್ ಅನಿರುಧನ್ ತಿಳಿಸಿದರು.
ಇದನ್ನೂ ಓದಿ: ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ; ಈ ಬಾರಿಯ ಮುಂಗಾರು ಬಗ್ಗೆ ಸಿಹಿ ಸುದ್ದಿ ನೀಡಿದ ಹವಾಮಾನ ಇಲಾಖೆ