ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ತಂತ್ರಜ್ಞಾನ ಕೇಂದ್ರದ ಸಂಶೋಧಕರು ನೀರಿನಿಂದ ಆರ್ಸೆನಿಕ್‌ನಂತಹ (ವಿಷಕಾರಿ ಮೂಲಧಾತು) ಭಾರವಾದ ಲೋಹ ಮತ್ತು ಇತರ ಮಾಲಿನ್ಯಕಾರಕ ವಸ್ತುಗಳನ್ನು ತೆಗೆದು ಹಾಕಲು ಹೊಸ ಪರಿಹಾರ ಕಂಡುಹಿಡಿದಿದ್ದಾರೆ.
ಮೂರು-ಹಂತದ ವಿಧಾನವನ್ನು ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳು ಪೇಟೆಂಟ್ ಪ್ರಕ್ರಿಯೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಪರಿಸರಸ್ನೇಹಿ ವಿಧಾನ ಬಳಸಿ ಭಾರೀ ಲೋಹಗಳನ್ನು ಸಮರ್ಥವಾಗಿ ವಿಲೇವಾರಿ ಮಾಡುವುದು ಇದರ ಮುಖ್ಯ ಉದ್ದೇಶ. ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳಲ್ಲಿ ಆರ್ಸೆನಿಕ್ ತೆಗೆದುಹಾಕಿ ಶುದ್ಧ ನೀರನ್ನು ಒದಗಿಸುತ್ತಿವೆ ಎಂದು ಸಿಎಸ್‌ಟಿಯ ಸಹಾಯಕ ಪ್ರಾಧ್ಯಾಪಕ ಯಜ್ಞಸೇನಿ ರಾಯ್ ತಿಳಿಸಿದ್ದಾರೆ.
ವಿಷಕಾರಿ ಅಂಶ ಬೇರ್ಪಡಿಸುವ ವಿಧಾನ: ಹಲವು ವರದಿಗಳ ಪ್ರಕಾರ, ಭಾರತದ 21 ರಾಜ್ಯಗಳ 113 ಜಿಲ್ಲೆಗಳು ಪ್ರತೀ ಲೀಟರ್‌ಗೆ 0.01 ಎಂ.ಜಿ ಗಿಂತ ಹೆಚ್ಚು ಆರ್ಸೆನಿಕ್ ಮಟ್ಟವನ್ನು ಹೊಂದಿದ್ದರೆ, 23 ರಾಜ್ಯಗಳ 223 ಜಿಲ್ಲೆಗಳು ಪ್ರತೀ ಲೀಟರ್‌ಗೆ 1.5 ಎಂ.ಜಿಗಿಂತ ಹೆಚ್ಚಿನ ಫ್ಲೋರೈಡ್ ಅಂಶದಿಂದ ಕೂಡಿವೆ. ಇದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಮತ್ತು ಹಲವು ಜಗತ್ತಿನ ದೇಶಗಳು ನಿಗದಿಪಡಿಸಿರುವ ಮಿತಿಗಳನ್ನು ಮೀರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಮಾಲಿನ್ಯಕಾರಕಗಳು ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದಾಗಿದೆ. ಆದ್ದರಿಂದ ಈ ಅಂಶವನ್ನು ನೀರಿನಿಂದ ಶುದ್ಧೀಕರಿಸುವುದು ಅಗತ್ಯ ಎಂದಿದ್ದಾರೆ.
ಮೂರು ಹಂತಗಳ ಈ ತಂತ್ರಜ್ಞಾನದಲ್ಲಿ ನೀರಿನಿಂದ ಬೇರ್ಪಡಿಸಿದ ಭಾರೀ ಲೋಹವನ್ನು ಪರಿಸರಸ್ನೇಹಿ ವಿಧಾನದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಲಿದೆ. ವಿಷಕಾರಿ ಲೋಹ ಎಲ್ಲೆಂದರಲ್ಲಿ ಹರಿದಾಗ ಗುಂಡಿಗಳಲ್ಲಿ ತುಂಬಿ ಮತ್ತೆ ಭೂಮಿಯೊಳಗೆ ಹೋಗುವುದನ್ನೂ ಈ ಸಾಧನದಿಂದ ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಪ್ರಯೋಗ ಮುಂದುವರಿಕೆ: ಅಭಿವೃದ್ಧಿಪಡಿಸಿರುವ ಜೈವಿಕ ನಿರ್ಜಲೀಕರಣ ವಿಧಾನಕ್ಕೆ ಹಸುವಿನ ಸಗಣಿಯಲ್ಲಿ ಸಿಗುವ ಒಂದು ಬಗೆಯ ಬ್ಯಾಕ್ಟೀರಿಯಾ ಬಳಸಲಾಗುತ್ತದೆ. ಈ ಬ್ಯಾಕ್ಟೀರಿಯಾ ಭಾರ ಲೋಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಇದನ್ನು ಐಐಎಸ್‌ಸಿಯ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನೀರು ಶುದ್ಧೀಕರಿಸುವ ಈ ಸಾಧನವನ್ನು ಎಲ್ಲಿ ಬೇಕಾದರೂ ಅತ್ಯಂತ ಸುಲಭವಾಗಿ ಜೋಡಿಸಿ ಬಳಕೆ ಮಾಡಬಹುದಾಗಿದೆ. ಪ್ರಯೋಗಾಲಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟಕ್ಕೆ ಅನುಗುಣವಾಗಿ ಇಬ್ಬರು ವ್ಯಕ್ತಿಗಳಿಗೆ ಮೂರು ದಿನಗಳಿಗೆ ಬೇಕಾಗುವಷ್ಟು ಶುದ್ಧೀಕರಿಸಿದ ನೀರು ಸಿಗುತ್ತದೆ. ಐಎನ್‌ಆರ್‌ಇಎಂ ಫೌಂಡೇಶನ್ ಮತ್ತು ಅರ್ಥ್ ವಾಚ್ ಸಂಸ್ಥೆಗಳ ಸಹಯೋಗದಲ್ಲಿ ಮೂಲಕ ಬಿಹಾರದ ಬಾಗಲ್ಪುರ ಮತ್ತು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಈ ಪ್ರಯೋಗ ಮುಂದುವರೆದಿದೆ ಎಂದು ಯಜ್ಞಸೇನಿ ರಾಯ್ ಹೇಳಿದ್ದಾರೆ.