ಬೆಳ್ತಂಗಡಿ (ದಕ್ಷಿಣ ಕನ್ನಡ): ಅನ್ನಂ ಪರಬ್ರಹ್ಮ ಸ್ವರೂಪಂ ಅಂದ್ರೆ ನಾವು ತಿನ್ನುವ ಅನ್ನ ದೇವರಿಗೆ ಸಮಾನ ಎಂದರ್ಥ. ಹಾಗಾಗಿ ಊಟ ಮಾಡುವಾಗ ಆಹಾರ ಅರ್ಧಂಬರ್ದ ತಿಂದು ಇನ್ನುಳಿದದ್ದನ್ನು ಕಸಕ್ಕೆ ಹಾಕುವ ಪ್ರವೃತ್ತಿ ಕೆಲವರಲ್ಲಿರುತ್ತೆ. ಈ ಹಿನ್ನೆಲೆ ಆಹಾರ ವ್ಯರ್ಥ ಮಾಡಬಾರದು ಎಂಬ ಉದ್ದೇಶದಿಂದ ತಟ್ಟೆಯಲ್ಲಿ ಅನ್ನ ಬಿಟ್ಟರೆ ರೂ. 20 ಕಾಣಿಕೆ ಹಾಕಬೇಕು ಎಂಬ ಬೋರ್ಡ್ಅನ್ನು ಪಡಂಗಡಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅಳವಡಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅನ್ನ ಸಂತರ್ಪಣೆ ಸಾಮಾನ್ಯ. ಅನ್ನ ಸಂತರ್ಪಣೆಯಲ್ಲಿ ಹಲವು ವಿಧದ ಆಹಾರ ಖಾದ್ಯಗಳು ಇದ್ದೇ ಇರುತ್ತವೆ. ಹೆಚ್ಚಿನವರು ಅನ್ನದ ಜೊತೆಗೆ ಎಲ್ಲಾ ಖಾದ್ಯಗಳನ್ನು ಬಡಿಸಿಕೊಂಡು, ಅರ್ಧ ಊಟ ಮಾಡಿ ಉಳಿದದ್ದನ್ನು ಬೀಸಾಡುವುದು ವಾಡಿಕೆಯಾಗಿದೆ.
ಅನ್ನಕ್ಕೆ ಪವಿತ್ರ ಸ್ಥಾನವಿದೆ. ದೇಶದ ಬೆನ್ನೆಲುಬಾದ ರೈತರ ಕಠಿಣ ಶ್ರಮದ ಫಲವಾಗಿ ಅನ್ನ ನಮ್ಮದಾಗುತ್ತದೆ. ಅದೇ ರೀತಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ನೀಡಿದ ದೇಣಿಗೆಯಲ್ಲಿ ಅನ್ನದಾನ ಮಾಡಲಾಗುತ್ತದೆ. ಸಾರ್ವಜನಿಕರ ಹಣ ಸಾಮಾಜಿಕವಾಗಿ ಉಪಯೋಗ ಆಗಬೇಕೇ ಹೊರತು ಈ ರೀತಿ ಹಾಳಾಗಬಾರದು ಎಂಬ ವಿಚಾರಕ್ಕೆ ಇಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅನ್ನ ಹಾಳು ಮಾಡುವವರಿಗಾಗಿಯೇ ಈ ಬೋರ್ಡ್ ಅಳವಡಿಸಲಾಗಿದೆ.
ಅದಲ್ಲದೇ ಅನ್ನ ಬಹಳ ಮೌಲ್ಯಯುತವಾದ ವಸ್ತು ಅದನ್ನು ಭಕ್ತಿಯಿಂದ ಸ್ವೀಕರಿಸಬೇಕು ಬಿಸಾಡಬಾರದು ಎಂಬ ಸಂದೇಶ ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಈ ರೀತಿಯ ಬೋರ್ಡ್ ಅಳವಡಿಸಲಾಗಿದೆ ಎಂದು ಸಮಿತಿಯ ಸಂತೋಷ್ ಜೈನ್ ಪಡಂಗಡಿ ಮಾಹಿತಿ ನೀಡಿದ್ದಾರೆ. ಇದೀಗ ಈ ಬೋರ್ಡ್ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರಲ್ಲದೆ ಅನ್ನವನ್ನು ಬಿಸಾಡಬೇಡಿ ಬೆಲೆ ನೀಡಿ ಎಂಬ ಸಂದೇಶವನ್ನು ಹಾಕುತ್ತಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ರಾಮನ ಅವತಾರದ ಗಣಪತಿ ಪ್ರತಿಷ್ಠಾಪನೆ: ಮೊದಲ ಪೂಜೆ ಸಲ್ಲಿಸಿದ ಡಿಸಿ, ಎಸ್ಪಿ - special ganesha idol