ಬೆಂಗಳೂರು: "ಕೇಂದ್ರ ಸರ್ಕಾರ ಹತ್ತು ವರ್ಷಗಳ ಕಾಲ ತುಘಲಕ್ ಮಾದರಿಯಲ್ಲಿ ಆಡಳಿತ ನಡೆಸಿದೆ. ಈ ಬಾರಿಯ ಚುನಾವಣೆಯ ವೇಳೆ ಜನತೆ ಎಚ್ಚೆತ್ತುಕೊಳ್ಳದಿದ್ದರೆ ದೇಶದಲ್ಲಿ ಮುಂದೆ ಚುನಾವಣೆಯೇ ನಡೆಯದಿರುವ ಸಾಧ್ಯತೆಯಿದೆ" ಎಂದು ಖ್ಯಾತ ಅರ್ಥಶಾಸ್ತ್ರಜ್ಞ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಚುನಾವಣಾ ಬಾಂಡ್ ಬಿಜೆಪಿ ಸರ್ಕಾರದ ಜಗತ್ತಿನ ಅತಿ ದೊಡ್ದ ಹಗರಣವಾಗಿದೆ. ಈ ಹಗರಣದ ಕಾರಣದಿಂದ ಈ ಚುನಾವಣೆ ಪ್ರತಿಪಕ್ಷಗಳು ಮತ್ತು ಬಿಜೆಪಿ ನಡುವೆ ಹಣಾಹಣಿಯಾಗಿ ಉಳಿದಿಲ್ಲ. ಇದು ಭ್ರಷ್ಟಾಚಾರದ ವಿರುದ್ದ ಜನತೆಯ ಯುದ್ಧವಾಗಿ ಬದಲಾಗಿದೆ" ಎಂದು ಹೇಳಿದರು.
"ಜನಾಂಗೀಯ ಘರ್ಷಣೆಗಳಿಂದಾಗಿ ಮಣಿಪುರ ನಲುಗಿದ್ದು, ಪ್ರಧಾನಿ ಮೋದಿ ಮತ್ತೆ ಅಧಿಕಾರ ಹಿಡಿದರೆ ಭಾರತದ ಉದ್ದಗಲಕ್ಕೂ ಅದು ವ್ಯಾಪಿಸಲಿದೆ. ಬಡತನ ಕೂಡ ತಂಡವಾಡುತ್ತಿದ್ದು ಸರ್ಕಾರ ಅದನ್ನು ಕೂಡ ಮುಚ್ಚಿಡುವ ಸರ್ವ ಪ್ರಯತ್ನ ಮಾಡಿದೆ. ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿದರೆ ಭಾರತ ಮತ್ತೆ ಚುನಾವಣೆಗಳನ್ನು ನೋಡುವುದಿಲ್ಲ" ಎಂದು ಅವರು ಅಭಿಪ್ರಾಯಪಟ್ಟರು.
"ಸಾಮಾನ್ಯ ಜನರ ದಿನಬಳಕೆ ವಸ್ತುಗಳ ಖರ್ಚು ವೆಚ್ಚಗಳು ಕಳೆದ 10 ವರ್ಷದ ಮೋದಿ ಸರ್ಕಾರದ ಅವಧಿಯಲ್ಲಿ ಹೆಚ್ಚಾಗಿವೆ. ಬೇಳೆ ಕಾಳುಗಳ ಬೆಲೆ ಕೆಜಿಗೆ ಸುಮಾರು 170 ರೂಪಾಯಿಗೆ ತಲುಪಿದೆ. ಬೆಲ್ಲ 53 ರೂಪಾಯಿ, ಸಕ್ಕರೆ 45 ರೂಪಾಯಿ, ಶುಂಠಿ 85 ರೂಪಾಯಿ, ಹಸಿ ಮೆಣಸಿನಕಾಯಿ 83 ರೂಪಾಯಿಗೆ ತಲುಪಿದೆ. ಆದರೆ ಸರ್ಕಾರ ಬೇರೆಯದೇ ಲೆಕ್ಕಾಚಾರ ಜನರ ಮುಂದಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ" ಎಂದು ಅವರು ಆರೋಪಿಸಿದರು.
"ಮೋದಿ ಸರ್ಕಾರ ರಸ್ತೆಗಳ ಅಭಿವೃದ್ಧಿಯ ವಿಚಾರದಲ್ಲೂ ಸುಳ್ಳು ಲೆಕ್ಕ ತೋರಿಸಿದೆ. ಭಾರತ ಐದನೆಯ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಲಾಗುತ್ತಿದೆ. ಆದರೆ ಮತ್ತೆ 2047 ಕ್ಕೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದಾಗಿ ಮೋದಿ ಹೇಳುತ್ತಿದ್ದಾರೆ. ಎರಡೂ ಹೇಳಿಕೆಗಳು ಒಂದಕ್ಕೊಂದು ತದ್ವಿರುದ್ಧವಾಗಿವೆ. ಭಾರತದ ಉದ್ಯಮಗಳಿಗೆ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡದೆ, ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲಾಗುತ್ತಿದೆ. ಜಾಗತಿಕ ಬಡತನದ ಅಂಕಿ ಅಂಶಗಳನ್ನು ಗಮನಿಸಿದರೆ ಈ ವೈರುಧ್ಯಗಳು ಕಣ್ಣ ಮುಂದೆಯೇ ಕಾಣಸಿಗುತ್ತದೆ. 82 ಕೋಟಿ ಜನರಿಗೆ ಕೇಂದ್ರ ಸರಕಾರವೇ ಉಚಿತ ಅಕ್ಕಿ ದವಸ ಧಾನ್ಯಗಳನ್ನು ಒದಗಿಸುತ್ತಿರುವುದು ಭಾರತದ ಬಡತನ ಮತ್ತು ಜನಸಾಮಾನ್ಯರ ಬವಣೆಗೆ ಸಾಕ್ಷಿಯಾಗಿದೆ" ಎಂದು ಪರಕಾಲ ಪ್ರಭಾಕರ್ ಹೇಳಿದರು.
ಇದನ್ನೂ ಓದಿ : ನೇಹಾ ಕೊಲೆ ಪ್ರಕರಣ - ಜಿಹಾದಿಗಳ ರಾಜ್ಯವಾಗುತ್ತಿದೆ ಕರ್ನಾಟಕ: ಆರ್.ಅಶೋಕ್ ಆರೋಪ - R Ashok