ದಾವಣಗೆರೆ: ಗೆಲುವಿಗಾಗಿ ಹೋರಾಟ ಮಾಡಿ ಗೆದ್ರೆ ಅದು ಶಾಮನೂರು ಕುಟುಂಬದ ಗೆಲುವಾಗುತ್ತೆ. ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿ ಗೆದ್ರೆ ಅದು ಕಾಂಗ್ರೆಸ್ಗೆ ನಿಜವಾದ ಗೆಲುವು ತಂದುಕೊಟ್ಟಂತೆ ಆಗುತ್ತದೆ ಎಂದು ಟಿಕೆಟ್ ವಂಚಿತ ಕಾಂಗ್ರೆಸ್ ಮುಖಂಡ ಜಿ ಬಿ ವಿನಯ್ ಕುಮಾರ್ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು ನಾನು ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ. ನಾನು ಸ್ಪರ್ಧೆ ಮಾಡಿ ಗೆದ್ರೆ ಅದು ಕಾಂಗ್ರೆಸ್ ಗೆಲುವು. ಜನ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ನಾನೇ. ನಾನು ಯಾವಾಗಲೂ ಕಾಂಗ್ರೆಸ್ ಪಕ್ಷನೇ. ಯಾವಾಗಲೂ ಕಾಂಗ್ರೆಸ್ ವಿರೋಧಿ ಕೆಲಸ ಮಾಡಿಲ್ಲ. ನಾನು ಸ್ಪರ್ಧೆ ಮಾಡಿದ್ರೆ ಬಿಜೆಪಿಯನ್ನು ಸೋಲಿಸುತ್ತೇನೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಗೆ ಬರುವ ಮತಗಳು ಶಿಫ್ಟ್ ಆಗುತ್ತವೆ. ನಾನು ಇಬ್ಬರನ್ನು ಸೋಲಿಸುತ್ತೇನೆ ಅಂತಾ ಹೇಳುತ್ತಿಲ್ಲ, ನಾನು ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ. ಅಹಿಂದ ಕೂಗು ವಿನಯ್ ಕುಮಾರ್ ಪರ ಇದೆ ಎಂದರು.
ಇನ್ನೂ ಎರಡು ಕ್ಷೇತ್ರಗಳಿವೆ. ಆ ಕ್ಷೇತ್ರಗಳಲ್ಲಿ ಸಭೆ ನಡೆಸಿ ಅಭಿಪ್ರಾಯ ಪಡೆದು ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮಾಡುವೆ. ನಾನು ನಾಮಪತ್ರ ಸಲ್ಲಿಸುತ್ತೇನೆ. ಸಲ್ಲಿಸಿದ ನಂತರ ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನನಗೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಂದಲೂ ಫೋನ್ ಬಂದಿತ್ತು. ಸ್ಪರ್ಧೆ ಮಾಡ್ಬೇಡಿ ಎಂದು ಒತ್ತಡ ಹೇರುತ್ತಿದ್ದಾರೆ. ಟಿಕೆಟ್ ವಂಚಿತನಾಗಿದ್ದ ನನಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಒಂದು ಕರೆ ಮಾಡಿ ಕೇಳಲಿಲ್ಲ. ಏನೂ ಎತ್ತವೆಂದು ಸಚಿವರು ಕೇಳ್ಬುಹುದಿತ್ತು. ನಾನು ದಾವಣಗೆರೆ ಲೋಕಸಭಾ ಕ್ಷೇತ್ರದ ಹಳ್ಳಿ ಹಳ್ಳಿ ಓಡಾಡಿದ್ದೇನೆ, ಮತದಾರರ ಒಲವು ನನ್ನ ಪರ ಇದೆ ಎಂದರು.
ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಮಿಸ್ ಆಗಿರಬಹುದು. ಆದ್ರೆ ನಾನು ಪಕ್ಕಾ ಕಾಂಗ್ರೆಸ್ಸಿಗ, ಕಾಂಗ್ರೆಸ್ ಸೋಲಿಸುವುದು, ಬಿಜೆಪಿ ಗೆಲ್ಲಿಸುವುದು ನನ್ನ ಗುರಿ ಅಲ್ಲ. ನಾನು ಗೆಲ್ಲುವ ಕಡೆ ಪ್ರಯತ್ನ ಮಾಡುತ್ತೇನೆ. ನಾನು ಸಹ ಕಾಂಗ್ರೆಸ್ ಅಭ್ಯರ್ಥಿ ಎಂದೇ ಪ್ರಚಾರ ಮಾಡಿ ಅಹಿಂದ ಮತಗಳನ್ನು ಒಟ್ಟುಗೂಡಿಸುತ್ತೇನೆ. ಎಲ್ಲ ಅಹಿಂದ ಮುಖಂಡರು ಜಿಲ್ಲೆ, ರಾಜ್ಯ ಕಾಂಗ್ರೆಸ್ ಮುಖಂಡರು ನನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಆದ್ರೆ ನಾನು ನೂರಾರು ಹಳ್ಳಿಗಳ ಜನಸಾಮಾನ್ಯರ, ಮತದಾರರ ಅಭಿಪ್ರಾಯದಂತೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ವಿನಯ್ ಕುಮಾರ್ ಹೇಳಿದರು.
ಓದಿ: ಸಿಎಂ ಸಿದ್ದರಾಮಯ್ಯಗೆ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ: ಪ್ರಹ್ಲಾದ್ ಜೋಶಿ - Pralhad Joshi