ತುಮಕೂರು: ನಾನು ಜೈಲಿನಿಂದ ಹೊರಗೆ ನಂತರ ಸರ್ಕಾರ ಪತನ ಆಗಲಿದೆ ಎಂದು ವಕೀಲ ದೇವರಾಜೇಗೌಡ ನೀಡಿರುವ ಹೇಳಿಕೆಗೆ ಗೃಹ ಸಚಿವ ಜಿ.ಪರಮೇಶ್ವರ್ ಪತ್ರಿಕ್ರಿಯಿಸಿದ್ದು, ಹಾಗಾದರೆ ದೇವರಾಜೇಗೌಡ ಜೈಲಿನಲ್ಲಿಯೇ ಇರಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಟಿ ಅಧಿಕಾರಿಗಳು ವಕೀಲ ದೇವರಾಜೇಗೌಡ ಹೇಳಿಕೆ ಬಗ್ಗೆ ಸಾಧಕ ಬಾಧಕ ಅರಿತು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ ಸರಿಯಾಗಿದೆ: ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಕೊಲೆಗಳು ಎಷ್ಟು ಆಗಿವೆ ಎಂದು ಹೇಳುವುದಕ್ಕಿಂತ ಮೊದಲು ಬಿಜೆಪಿ ಆಡಳಿತದ ಅವಧಿಯಲ್ಲಿ ಎಷ್ಟು ಕೊಲೆಗಳು ಆಗಿವೆ ಎಂಬುದನ್ನು ನೆನಪಿಸಿಕೊಳ್ಳಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ.
ಬಿಜೆಪಿಯವರಿಂದ ಹೇಳಿಸಿಕೊಂಡು ಕೇಳಿಸಿಕೊಂಡು ಕಾನೂನು ಸುವ್ಯವಸ್ಥೆ ಮಾಡುವ ಅಗತ್ಯವಿಲ್ಲ. ಇದಕ್ಕಾಗಿ ಏನು ಕ್ರಮ ಬೇಕಾದ್ರೂ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಬಿಜೆಪಿಯವರು ಶಾಂತಿ ಕದಡಲು ಯತ್ನಿಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ಸರ್ಕಾರಕ್ಕಿದೆ. ಒಂದೊಂದು ಘಟನೆಗೂ ಒಂದೊಂದು ಕಾರಣವಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ, ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯತ್ನಿಸಿದರೂ ನಾವು ಬಿಡುವುದಿಲ್ಲ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಡಿಯುವ ನೀರು ಯೋಜನೆ: ತುಮಕೂರು ಜಿಲ್ಲೆಗೆ ಕುಡಿಯುವ ನೀರು ಯೋಜನೆಗೆ ಹೇಮಾವತಿ ನಾಲೆಯಿಂದ 24 ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ. ಆದರೆ, ತುಮಕೂರಿಗೆ 18 ಟಿಎಂಸಿ ಯಷ್ಟು ನೀರು ಸಿಗಲೇ ಇಲ್ಲ. ಗುಬ್ಬಿ ಮತ್ತು ತಿಪಟೂರು, ತುರುವೇಕೆರೆ ತಾಲೂಕಿಗೆ ಹಂಚಿಕೆ ಆಗಿರುವ ಹೇಮಾವತಿ ನೀರು ಆಗಿದೆ.
ಈ ನಡುವೆ ಕುಣಿಗಲ್ ಕೆರೆಗೆ ನೀರು ಹೋಗಲೂ ಮಾಡಲಾಗಿದೆ. ಈ ನಡುವೆ ಗುಬ್ಬಿ ತಾಲೂಕಿನ ರಂಪುರ ಬಳಿಯಿಂದ ಮಾಗಡಿಗೆ ತೆಗೆದುಕೊಂಡು ಹೋಗುವ ಕುರಿತು ಸರಕಾರ ಮುಂದೆ ಪ್ರಸ್ತಾವನೆ ಯೊಂದು ಬಂದಿತ್ತು. ಸರಕಾರ ಇದನ್ನು ಪರಿಗಣಿಸಿ 1000 ಕೋಟಿ ರೂ. ನಿಗದಿಪಡಿಸಿ ಎಕ್ಸ್‌ಪ್ರೆಸ್ ಕೆನಾಲ್ ಮಾಡಬಹುದು ಎಂದು ಅನುಮೋದನೆ ನೀಡಿದೆ. ಇದು ಸರಕಾರದ ತೀರ್ಮಾನವಾಗಿದೆ. ಅದರ ಕುರಿತು ಕೆಲಸ ಆರಂಭವಾಗಿದೆ. ಇದು ಜಿಲ್ಲೆಯ ಇಬ್ಬರು ಸಚಿವರ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಸ್ಥಳೀಯರು ಯೋಜನೆ ಅನುಷ್ಠಾನದಿಂದ ತೊಂದರೆಯಾಗಲಿದೆ ಎಂದು ನನಗೆ ಮನವಿ ಪತ್ರ ನೀಡಿದ್ದಾರೆ. ಕೆ.ಎನ್. ರಾಜಣ್ಣ ಮತ್ತು ನಾನು ಕೂಡ ಕ್ಯಾಬಿನೆಟ್ ನಲ್ಲಿ ಈ ಕುರಿತು ಪ್ರಸ್ತಾಪಿಸಿ ಜಿಲ್ಲೆಗೆ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯಿಂದ ತೊಂದ್ರೆಯಾಗಲಿದೆ ಎಂದು ಹೇಳಿದ್ದೇವೆ. ಇದರಲ್ಲಿ ವಿರೋಧ ಪಕ್ಷಗಳು ರಾಜಕೀಕರಣ ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರೊಂದಿಗೆ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.