ಹುಬ್ಬಳ್ಳಿ: ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯುತ್ತಿದೆ. ಇನ್ನು ವಕ್ಫ್ ಸಚಿವ ಜಮೀರ್ ಅಹ್ಮದ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಹಳೇ ವಿಡಿಯೋ ಬಿಡುಗಡೆ ಮಾಡಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ನಾನು ಯಾವುದೇ ವಕ್ಫ್ ಮೀಟಿಂಗ್ ಮಾಡಿಲ್ಲ. ಅನ್ವರ್ ಮಾಣಿಪ್ಪಾಡಿ ಅವರ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿತ್ತು. ಕಾಂಗ್ರೆಸ್ನ ದೊಡ್ಡ ದೊಡ್ಡ ನಾಯಕರು ಎಷ್ಟೆಷ್ಟು ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಅನ್ವರ್ ಮಾಣಿಪ್ಪಾಡಿ ಅವರ ವರದಿಯಲ್ಲಿ ಸ್ಪಷ್ಟವಾಗಿದೆ. ವರದಿಯಲ್ಲಿರುವ ಆಸ್ತಿಯನ್ನು ಹಿಂಪಡೆಯಬೇಕು ಅಂದಿದ್ದೇನೆ ಹೊರತು, ನಮ್ಮ ಸರ್ಕಾರ ಇದ್ದಾಗ ರೈತರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ರೈತರ ಜಮೀನಿನ ಬಗ್ಗೆ ನಾನು ಮಾತನಾಡಿಲ್ಲ" ಎಂದು ಸ್ಪಷ್ಟನೆ ನೀಡಿದರು.
"ಯಾವುದೋ ಸಂದರ್ಭದಲ್ಲಿ ಮಾತನಾಡಿದ್ದನ್ನು ತೋರಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮತ್ತು ಸಚಿವ ಜಮೀರ್ ಮಾಡುತ್ತಿದ್ದಾರೆ. ಜಮೀರ್ ಅವರು ರೈತರಿಗೆ ನೋಟಿಸ್ ಕೊಡುವ ಬದಲು ವಕ್ಫ್ ಆಸ್ತಿ ಒತ್ತುವರಿ ಮಾಡಿರುವ ಕಾಂಗ್ರೆಸ್ ನಾಯಕರಿಂದ ರಿಕವರಿ ಮಾಡಲಿ ಮೊದಲು. ಸಿಎಂ ಸಿದ್ದರಾಮಯ್ಯನವರು ಹೇಳಿದ್ದು ಕಣ್ಣೊರೆಸುವ ತಂತ್ರ. ರೈತರಿಗೆ ಮತ್ತೆ ನೋಟಿಸ್ ಕೊಡಲ್ಲ ಅಂತಾ ಗ್ಯಾರಂಟಿ ಏನು?. ಅವರಿಗೆ ಕಾಳಜಿ ಇದ್ರೆ ವಕ್ಫ್ ಗೆಜೆಟ್ ನೋಟಿಫಿಕೇಷನ್ ರದ್ದುಪಡಿಸಲಿ. ವಕ್ಫ್ ಕಾಯ್ದೆ ತಿದ್ದುಪಡಿ ಮಾಡಬೇಕು. ಆಗ ಮಾತ್ರ ರೈತರ ಭೂಮಿ ಸುರಕ್ಷಿತವಾಗಿರುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: ವಕ್ಫ್ ನೋಟಿಸ್ ವಾಪಸ್ಗೆ ಸಿಎಂ ಮತ್ತೊಮ್ಮೆ ಸೂಚಿಸಿದ್ದು, ಅಲ್ಲಿಗೆ ವಿವಾದ ಸ್ಥಗಿತ: ಪರಮೇಶ್ವರ್