ಶಿವಮೊಗ್ಗ: ಈ ಬಾರಿ ರಾಜ್ಯದಲ್ಲಿ ಎಲ್ಲ 28 ಸ್ಥಾನಗಳಲ್ಲೂ ಗೆಲ್ಲುತ್ತೇವೆ ಎಂದು ಯಡಿಯೂರಪ್ಪನವರು ಹೇಳುತ್ತಿರುವುದು ಹಾಸ್ಯಾಸ್ಪದ. ಒಂದು ವೇಳೆ ಅವರು ಹೇಳಿದ ಹಾಗೆ ನಡೆದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಗೆಲ್ಲದೇ ಹೋದರೆ ಯಡಿಯೂರಪ್ಪ ಹಾಗೂ ಅವರ ಮಕ್ಕಳು ರಾಜೀನಾಮೆ ನೀಡುತ್ತಾರೆಯೇ? ಎಂದು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಸವಾಲು ಹಾಕಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ತನಗೆ ಮತ ಕೇಳಲಿಲ್ಲ. ಬದಲಾಗಿ ಮೋದಿಗೆ ಮತ ನೀಡಿ ಎಂದು ಕೇಳಿದ್ದಾರೆ. ಇದರಿಂದ ರಾಘವೇಂದ್ರ ಏನೂ ಕೆಲಸ ಮಾಡಿಲ್ಲ ಅಂತಾಯಿತು. ಯಡಿಯೂರಪ್ಪನವರು ಸಿಎಂ ಆದಾಗ ಕೇವಲ ಶಿಕಾರಿಪುರಕ್ಕೆ ಮಾತ್ರ ಸಿಮೀತವಾಗಿದ್ದರು. ರಾಘವೇಂದ್ರ ನಿಷ್ಕ್ರಿಯ ರಾಜಕಾರಣಿ. ಕೇವಲ ಮೋದಿ ಹೆಸರು ಹೇಳಿಕೊಂಡು ಹೋಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಧಮ್, ತಾಕತ್ತಿದ್ದರೆ ನಮ್ಮ ಸರ್ಕಾರ ಬೀಳಿಸಿ: ಯಡಿಯೂರಪ್ಪನವರು, ಮಕ್ಕಳು ಸೇರಿದಂತೆ ಕುಮಾರಸ್ವಾಮಿಯವರು ಧಮ್, ತಾಕತ್ ಇದ್ರೆ ನಮ್ಮ ಸರ್ಕಾರ ಬೀಳಿಸಲಿ ನೋಡೋಣ ಎಂದು ಸವಾಲೆಸೆದರು. ಈ ಸಲ ಎಲ್ಲಾ ಕಾಂಗ್ರೆಸ್ ಶಾಸಕರು ಗಟ್ಟಿಯಾಗಿದ್ದಾರೆ ಎಂದರು.
ಹಗರಣದ ತನಿಖೆ ನಡೆಸಲಿ: ಸಾಯಿ ಗಾರ್ಮೆಂರ್ಟ್ಸ್ ವಿಚಾರವನ್ನು ನಾವು ಬಿಡಲ್ಲ. ಅದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕೇವಲ 10 ಸಾವಿರಕ್ಕೆ ಒಂದು ಎಕರೆ ಜಾಗ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಇದರ ಜೊತೆಗೆ ಡಿಸಿಸಿ ಬ್ಯಾಂಕ್ ಹಗರಣವನ್ನೂ ತನಿಖೆ ನಡೆಸಬೇಕು. ತನಿಖೆ ನಡೆಸದೇ ಇದ್ದಲ್ಲಿ ನಾನು ರಾಜೀನಾಮೆ ನೀಡಿ ಹೋಗುತ್ತೇನೆ ಎಂದು ಹೇಳಿದರು.
ಪೆನ್ಡ್ರೈವ್ ವಿಚಾರವನ್ನು ಎಲ್ಲೆಡೆ ಚರ್ಚೆ ನಡೆಸುತ್ತಿದ್ದಾರೆ. ಅದು ಅಂತಾರಾಷ್ಟ್ರೀಯ ವಿಚಾರವಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ಪೆನ್ ಡ್ರೈವ್ ಇದೆ ಅಂತ ತೋರಿಸುತ್ತಿದ್ದರು. ಆಗ ತೋರಿಸಿದ ಪೆನ್ ಡ್ರೈವ್ ಪ್ರಜ್ವಲ್‌ದೇ ಇರಬೇಕು ಎಂದರು.
ಇನ್ನು, ಗ್ಯಾರಂಟಿ ಯೋಜನೆಯಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ, ದಾರಿ ತಪ್ಪಿದ್ದು ನಿಮ್ಮ ಪ್ರಜ್ವಲ್ ಎಂದು ಟೀಕಿಸಿದರು.
ಇದನ್ನೂ ಓದಿ: ಬರ ಪರಿಹಾರ ಸಾಲಕ್ಕೆ ಜಮೆ ಕ್ರೂರಾತಿ ಕ್ರೂರ ವರ್ತನೆ: ಕುಮಾರಸ್ವಾಮಿ ಕಿಡಿ - H D Kumaraswamy