ಮಂಗಳೂರು: "ನಾನು ಸಚಿವನಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸುವ ಕೆಲಸ ಮಾಡುತ್ತೇನೆ. ನಮ್ಮಲ್ಲಿ ಅರ್ಹ ಮತ್ತು ಯೋಗ್ಯ ಅಭ್ಯರ್ಥಿಗಳಿದ್ದಾರೆ" ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾಳೆ ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ" ಎಂದರು.
ಇದೇ ವೇಳೆ, "ಮುಂದಿನ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳು ಯಾರಾಗಬೇಕೆಂದು ಕೇಂದ್ರದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಬಹಳಷ್ಟು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ವರಿಷ್ಠರು ಯಾರನ್ನು ಸೂಚಿಸುತ್ತಾರೋ ಅವರು ಚುನಾವಣೆ ಎದುರಿಸಲಿದ್ದಾರೆ" ಎಂದು ಹೇಳಿದರು.
"ಬರಗಾಲಕ್ಕೆ ಕೇಂದ್ರ ರಾಜ್ಯ ಸರ್ಕಾರಕ್ಕೆ ನಯಾ ಪೈಸೆ ದುಡ್ಡು ನೀಡಿಲ್ಲ. ಬರೀ ಸಮಿತಿಯನ್ನು ಕಳುಹಿಸಿದ್ದಾರೆ. ಅವರಿಗೆ ವರದಿ ನೀಡಿ ನಾಲ್ಕು ತಿಂಗಳಾದರೂ ಇನ್ನೂ ದುಡ್ಡು ಬಂದಿಲ್ಲ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ರೂ ವಿಶೇಷ ಅನುದಾನ ನೀಡಿದೆ. ಆದ್ದರಿಂದ ಈ ಘೋರ ಅನ್ಯಾಯವನ್ನು ನಿಲ್ಲಿಸಿ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡುತ್ತೇವೆ. ನಿಲ್ಲಿಸದಿದಲ್ಲಿ ಮುಂದೆ ಆಗುವ ಅನಾಹುತಕ್ಕೆ ಕೇಂದ್ರ ಸರ್ಕಾರವೇ ಕಾರಣ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸಿಆರ್ಝಡ್ನಲ್ಲಿ ಹಲವೆಡೆ ಅಕ್ರಮ ಕಟ್ಟಡಗಳ ನಿರ್ಮಾಣದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅಕ್ರಮ ರೆಸಾರ್ಟ್, ಹೋಮ್ ಸ್ಟೇಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈ ಭಾಗದಲ್ಲಿ ಮೂರು ಎಕರೆಗಿಂತ ಕಡಿಮೆ ಬೇಸಾಯ ಮಾಡುವ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಅರಣ್ಯ ಒತ್ತುವರಿ ತೆರವಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ಆಗಬೇಕಿದೆ. ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಪಾರ ಹಾನಿಯಾಗುತ್ತಿದೆ. ಕರಾವಳಿ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಗುರಿಯಿದೆ. ಕಾಡ್ಗಿಚ್ಚು ನಿಯಂತ್ರಣಕ್ಕೆ ಅರಣ್ಯ ಇಲಾಖೆಗೆ ಪ್ರತ್ಯೇಕ ಹೆಲಿಕಾಪ್ಟರ್ ಅವಶ್ಯಕತೆಯಿಲ್ಲ. ಅವಶ್ಯಕತೆ ಇದ್ದರೆ ಖಾಸಗಿ ಹೆಲಿಕಾಪ್ಟರ್ಗಳ ಬಳಕೆ ಮಾಡಲಾಗುತ್ತದೆ" ಎಂದರು.
ಕುಮಾರಪರ್ವತ ಚಾರಣಕ್ಕೆ ಆನ್ಲೈನ್ ಬುಕ್ಕಿಂಗ್: "ಇನ್ನು ಮುಂದೆ ಕುಮಾರ ಪರ್ವತ ಚಾರಣಕ್ಕೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಚಾರಣಪಥದಲ್ಲಿ ಜನಜಂಗುಳಿ ಸೇರಿ ಪರಿಸರ ಹಾನಿಯ ಭೀತಿ ಎದುರಾಗಿದೆ. ಆದ್ದರಿಂದ ಚಾರಣ ನಿಯಂತ್ರಣ ಸಂಬಂಧ ಸಮಗ್ರ ಯೋಜನಾ ವರದಿ ತಯಾರಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಿ ಆನ್ಲೈನ್ ವ್ಯವಸ್ಥೆ ಮಂಜೂರಾತಿ ಮಾಡಲು ಸೂಚಿಸಿದ್ದೇನೆ" ಎಂದು ತಿಳಿಸಿದರು.
"ಏಕಾಏಕಿ ಸಾವಿರಾರು ಮಂದಿ ಹೋದರೆ ಇಕ್ಕಟ್ಟಾಗಿ ಸಮಸ್ಯೆ ಎದುರಾಗಲಿದೆ. ಆದ್ದರಿಂದ ದಿನಕ್ಕೆ ಎಷ್ಟು ಜನ ಹೋಗಬಹುದು ಎಂದು ನೋಡಿ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಮಿತಿ ಹಾಕಿಯೇ ಚಾರಣಿಗರಿಗೆ ನಾವು ಪಾಸ್‌ಗಳನ್ನು ಕೊಡಲಾಗುತ್ತದೆ. ನಿಯಮ ಮೀರಿ ಯಾರಿಗೂ ಬರಲು ಅವಕಾಶ ಕೊಡುವುದಿಲ್ಲ. ಚಾರಣ ನಿಯಂತ್ರಣ ಮಾಡಬೇಕಾದಲ್ಲಿ ಆನ್ಲೈನ್ ಬುಕ್ಕಿಂಗ್ ಅಗತ್ಯ" ಎಂದರು.
ಇದನ್ನೂ ಓದಿ: 'ದೆಹಲಿಗೆ ಯಾತ್ರೆ ಹೊರಟಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ' : ಹೆಚ್ಡಿಕೆ ಕಿಡಿ