ರಾಯಚೂರು: "5 ಸಾವಿರ ಕೋಟಿ ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಎಲ್ಲಿಂದ ತಂದು ಕೊಡ್ತಾರೆ ಗೊತ್ತಿಲ್ಲ" ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು ಬಿಜೆಪಿಯಿಂದ ರಾಹುಲ್ ಗಾಂಧಿ ಅವರು ಎಸ್ಸಿ/ಎಸ್ಟಿ ಮೀಸಲಾತಿ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
"5 ಸಾವಿರ ಕೋಟಿ ರೂ. ಕೊಡದಿದ್ದರೂ ಪರವಾಗಿಲ್ಲ, ಗುಲ್ಬರ್ಗದಲ್ಲಿರುವ 5 ಸಾವಿರ ಗುಂಡಿಗಳನ್ನಾದರೂ ಮುಚ್ಚಿ. ಈ ಸರ್ಕಾರ ಅಭಿವೃದ್ಧಿಯ ಪರವಾಗಿಲ್ಲ. ಅವರನ್ನು ಗೇಲಿ ಮಾಡುವಂತಹ ಪರಿಸ್ಥಿತಿ ಬಂದಿದೆ. ಕೇವಲ ನಾಟಕ ಕಂಪನಿಯನ್ನು ತಂದು ನಾಟಕ ತೋರಿಸಿ ಹೋಗಿದ್ದಾರೆ" ಎಂದು ಸರ್ಕಾರದ ವಿರುದ್ಧ ಗೇಲಿ ಮಾಡಿದರು.
"ಬೆಂಕಿ ಹಚ್ಚುತ್ತಿರುವುದು ಕಾಂಗ್ರೆಸ್, ಬೆಂಕಿ ಆರಿಸಲು ನಾವು ಹೋಗಬೇಕು ಅಲ್ವಾ. ಬೆಂಕಿ ಆರಿಸುವ ಕೆಲಸ ನಮಗಿದೆ. ನಾಗಮಂಗಲಕ್ಕೆ ಹೋಗಿ, ಪರಿಸ್ಥಿತಿಯನ್ನು ಕೂಡ ನಾನು ನೋಡಿ ಬಂದಿದ್ದೇನೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ಅವರ ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಕೇರಳದವರಿಗೆ ನಾಗಮಂಗಲದಲ್ಲಿ ಕೆಲಸ ಏನು" ಎಂದು ಪ್ರಶ್ನಿಸಿದರು.
"SDPI ಮತ್ತು PFI ಸಂಘಟನೆಯವರು ಅಲ್ಲಿದ್ದು, ವ್ಯವಸ್ಥಿತವಾಗಿ ಅದನ್ನು ಮಾಡ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಕುಮ್ಮಕ್ಕು ಕೊಡ್ತಿದ್ದಾರೆ" ಎಂದು ದೂರಿದರು.
ಇದೇ ವೇಳೆ ಅನಂತ ಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಕೈತಪ್ಪಿದ ತುರಿತು ಮಾತನಾಡಿದ ಅವರು, "ಕೇಂದ್ರದ ಮಂತ್ರಿಯಾಗಿದ್ದಾಗ ಅನಂತ್ ಕುಮಾರ್ ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ್ರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾರ್ಲಿಮೆಂಟ್ ಕರೆಸಿ, ದೇಶದ ಕ್ಷಮೆ ಕೇಳುವಂತೆ ಹೇಳಿದ್ರು. ಮತ್ತೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ರು. ಅದಕ್ಕೆ ನಾನೇ ನಮ್ಮ ಮುಖಂಡರಿಗೆ ಖಡಕ್ ಆಗಿ, ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಅಂತ ಹೇಳಿದ್ದೆ. ನಮ್ಮ ಪಕ್ಷ ಅವರಿಗೆ ಟಿಕೆಟ್ ಕೊಡದೆ ತಿರಸ್ಕಾರ ಮಾಡಿಬಿಟ್ಟಿತು. ಇದು ನಮ್ಮ ಬದ್ಧತೆ. ಭಾರತೀಯ ಜನತಾ ಪಕ್ಷದ ತಾಕತ್ತು ಏನ್ ಅಂತ ತೋರಿಸಿ ಆಯ್ತು. ಈಗ ನಿಮ್ಮ ತಾಕತ್ತು ತೋರಿಸಿ" ಕಾಂಗ್ರೆಸ್ಗೆ ಸವಾಲೆಸೆದರು.
ಇನ್ನು ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಸದ ರಾಹುಲ್ ಗಾಂಧಿಯ ಅಣಕು ಶವಯಾತ್ರೆಯನ್ನು ನಡೆಸುವ ಮೂಲಕ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಪ್ರತಿಭಟಿಸಿದರು.