ಹಾವೇರಿ/ಬೆಳಗಾವಿ: ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲೆಯ ಬಂಕಾಪುರ ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಸಂದಿದೆ. ಈ ಹಿನ್ನೆಲೆ ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಒಬಾಮಗೆ ಪತ್ರ ಬರೆದು ಆಹ್ವಾನಿಸಿದ್ದೇನೆ ಎಂದು ಹೇಳಿದರು.
ಈ ಕುರಿತು ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಹೆಚ್ ಕೆ ಪಾಟೀಲ್, ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಬರಾಕ್ ಒಬಾಮಾ ಅವರನ್ನು ಆಹ್ವಾನಿಸಿ ಪತ್ರ ಬರೆದಿದ್ದಾರೆ. ಡಿಸೆಂಬರ್ 26-27 ಅಥವಾ ಜನವರಿ-2025 ರಿಂದ ಅಕ್ಟೋಬರ್-2025ರೊಳಗಾಗಿ ದಿನಾಂಕ ನೀಡಲು ಕೋರಲಾಗಿದೆ. ಜಂಟಿ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸಲಾಗುವುದು ಎಂದು ತಿಳಿಸಿದರು.
ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಭೇಟಿ ನೀಡಿ, ವಿಸ್ತೃತವಾಗಿ ಚರ್ಚಿಸಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು. ಅಕ್ಟೋಬರ್ 2 ರಿಂದ ಒಂದು ವರ್ಷ ಕಾಲ ಶತಮಾನೋತ್ಸವ ವರ್ಷಾಚರಣೆ ನಡೆಯಲಿದೆ. ಅಂತಾರಾಷ್ಟ್ರೀಯ ಮಹತ್ವ ಪಡೆಯಲು ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ಹಾಗೂ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಕರೆಸಲು ಉದ್ದೇಶಿಸಲಾಗಿದೆ. ಗಾಂಧೀಜಿಯ ಕುರಿತು ವಿಶೇಷ ಅಭಿಮಾನ ಹೊಂದಿರುವ ಒಬಾಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಇನ್ನಷ್ಟು ಪ್ರಚುರಪಡಿಸಲು ಹಾಗೂ ಮನೆ ಮನೆಗೆ ಗಾಂಧೀಜಿ ಸಿದ್ಧಾಂತಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ. ಅರ್ಥಪೂರ್ಣ, ರಚನಾತ್ಮಕ ಕಾರ್ಯಕ್ರಮ ಆಯೋಜಿಸಲು ಗಾಂಧಿವಾದಿಗಳು, ಹಿರಿಯರ ಜತೆ ಚರ್ಚಿಸಿ ಅಧಿವೇಶನದ ಇತಿಹಾಸ ಮರುಸೃಷ್ಟಿ ಮತ್ತು ಮೆಲುಕು ಹಾಕಲು ಶತಮಾನೋತ್ಸವ ಆಚರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಶತಮಾನದ ಸಂಭ್ರಮ: ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಂದೇ ಬಾರಿ. ಅದು ನಡೆದಿದ್ದು ಗಡಿನಾಡು ಬೆಳಗಾವಿಯಲ್ಲಿ. ಡಿಸೆಂಬರ್ 26, 27, 1924ರಂದು ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ಐತಿಹಾಸಿಕ 39ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂಬುದು ಮತ್ತೊಂದು ವಿಶೇಷ. ಆ ಬಳಿಕ ಮತ್ತೆ ಗಾಂಧೀಜಿ ಯಾವುದೇ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸದೇ ಇರುವುದು ಗಮನಾರ್ಹ ಸಂಗತಿ. ಈ ಅಧಿವೇಶನಕ್ಕೀಗ ಶತಮಾನದ ಸಂಭ್ರಮ. ಈ ಹಿನ್ನೆಲೆ ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರವು ಬರಾಕ್ ಒಬಾಮಗೆ ಪತ್ರ ಬರೆದು ಆಹ್ವಾನ ನೀಡಿದೆ.
ಅಧಿವೇಶನ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9ರಿಂದ 20ರವರೆಗೆ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದ್ದು, ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದರು.
ಚುನಾವಣೆ ಬಂದಾಗ ಗಡಿ ವಿವಾದ ಮುನ್ನೆಲೆಗೆ; ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್ ಕೆ ಪಾಟೀಲ್, ಚುನಾವಣೆ ಬಂದಾಗ ಮತಗಳ ಬೇಟೆಗೆ ಮಹಾರಾಷ್ಟ್ರ ನಾಯಕರು ಗಡಿ ವಿವಾದದ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕದ ದೃಷ್ಟಿಯಿಂದ ಗಡಿ ವಿವಾದ ಮುಗಿದ ಅಧ್ಯಾಯ. ಎಂಇಎಸ್‌ನವರು ಕರಾಳ ದಿನ ಮಾಡುತ್ತಾರೆ ಎಂದರೆ ಗಡಿ ವಿವಾದ ಇದೆ ಎಂದು ಅರ್ಥವಲ್ಲ ಎಂದರು.
ಗಡಿ ವಿವಾದವೇ ಇಲ್ಲ. ಗಡಿ ವಿವಾದ ಇದೆ ಎಂದು ಯಾರು ಹೇಳಿದರು?. ಚುನಾವಣೆ ಬಂದಾಗ ಮಹಾರಾಷ್ಟ್ರ ನಾಯಕರಿಗೆ ಗಡಿವಿವಾದ ನೆನಪಾಗುತ್ತದೆ. ಹೇಗೆ ಬಿಜೆಪಿಗರಿಗೆ ಚುನಾವಣೆ ಬಂದಾಗ ವಕ್ಫ್, ರಾಮಮಂದಿರ ನೆನಪಾಗುತ್ತದೆಯೋ? ಹಾಗೆ ಚುನಾವಣೆ ಬಂದಾಗ ಮಹಾರಾಷ್ಟ್ರ ನಾಯಕರಿಗೆ ಗಡಿವಿವಾದ ನೆನಪಾಗುತ್ತದೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್ ನೀಡಿದ್ದು, ವಿಚಾರಣೆಗೆ ನಾಳೆ ಬೆಳಗ್ಗೆ 11ಕ್ಕೆ ಹಾಜರಾಗುವುದಾಗಿ ಸಿಎಂ ಹೇಳಿದ್ದಾರೆ ಎಂದ ಅವರು, ಮುಡಾ ತನಿಖೆ ಲೋಕಾಯುಕ್ತದಿಂದ ಬೇಡ, ಸಿಬಿಐಗೆ ಕೊಡುವಂತೆ ದೂರುದಾರರು ಒತ್ತಾಯಿಸಿದ್ದಕ್ಕೆ ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ. ಇವರಿಗೆ ಕೋರ್ಟ್ ಮೇಲೆ ವಿಶ್ವಾಸ ಇದೆ. ಲೋಕಾಯುಕ್ತ ಮೇಲೆ ವಿಶ್ವಾಸ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಬೆಳಗಾವಿಯ ವೀರಸೌಧ, ಹುದಲಿ ಸೇರಿ ಮತ್ತಿತರ ಸ್ಥಳಗಳಿಗೆ ಹೆಚ್.ಕೆ. ಪಾಟೀಲ ಸೇರಿ ಮತ್ತಿತರರು ಭೇಟಿ ನೀಡಲಿದ್ದಾರೆ. ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಮಿತಿಯ ರಾಜ್ಯ ಸಂಚಾಲಕ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್, ಸದಸ್ಯ ಎನ್.ಆರ್. ವಿಶುಕುಮಾರ್, ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಸೇರಿ ಮತ್ತಿತರರು ಈ ವೇಳೆ ಇದ್ದರು.
ಇದನ್ನೂ ಓದಿ: ಕೋವಿಡ್ ವೇಳೆ ಹೆಣಗಳಿಂದಲೂ ಬಸವರಾಜ ಬೊಮ್ಮಾಯಿ ಲಂಚ ಪಡೆದಿದ್ದಾರೆ: ಸಿಎಂ ಸಿದ್ದರಾಮಯ್ಯ