ಬೆಂಗಳೂರು: ಹೆಚ್ಡಿಕೆ ಬಗ್ಗೆ ನನಗೆ ವೈಯಕ್ತಿಕ ಗೌರವ ಇದೆ. ಈಗಲೂ ಇದೆ, ಮುಂದೆಯೂ ಇರುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರದಲ್ಲಿ ಇಂದು ಮಾತನಾಡಿದ ಅವರು, ಕುಮಾರಸ್ವಾಮಿಯವರು ಬಂಡೆ, ಕಲ್ಲು, ಚೂರಿ, ವಿಷ ಕೊಟ್ರು ಅನ್ನೋದು ಯಾಕೆ?. ನಾವು ಹಿರಿಯರಿಗೆ ಕೊಡುವ ಗೌರವವನ್ನು ಅವರು ಸ್ವೀಕಾರ ಮಾಡಬೇಕು. ನಮ್ಮಂಥವರನ್ನು ಕಳೆದುಕೊಳ್ಳೋದು ಸರಿಯಲ್ಲ. ಹಾಗೆ ಮಾಡಿದರೆ ಇಡೀ ಸಮುದಾಯವನ್ನು ಕಳೆದುಕೊಂಡಂತೆ. ಅವರು ಏನೇ ಅಂದ್ರೂ ಸಮುದಾಯಕ್ಕಾಗಿ ಗೌರವ ಕೊಟ್ಟಿದ್ದೇನೆ. ಏನೇ ಅಂದ್ರೂ ತಡೆದುಕೊಂಡಿದ್ದೇನೆ. ಆದರೆ ವೈಯಕ್ತಿಕವಾಗಿ ದಾಳಿ ಮಾಡಿದರು. ಯಾವುದೋ ಹೆಣ್ಮಕ್ಕಳ ಜಮೀನು ಬರೆಸಿಕೊಂಡೆ ಅಂದ್ರು. ಯಾವ ಹೆಣ್ಮಕ್ಕಳು, ಯಾವ ಜಮೀನು?. ಕುಮಾರಸ್ಚಾಮಿ ನನ್ನ ಸವಾಲು ಸ್ವೀಕಾರ ಮಾಡೋಕೆ ಆಗಲ್ಲ ಅಂದ್ರೆ ಬಿಟ್ಬು ಬಿಡೋಣ. ಚುನಾವಣೆ ಆದ್ಮೇಲೆ ಅಸೆಂಬ್ಲಿಯಲ್ಲಿ ಈ ಬಗ್ಗೆ ನೋಡೋಣ ಎಂದರು.
ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಓಟ್ ಹಾಕದಿದ್ದಲ್ಲಿ ನೀರು ಸರಬರಾಜು ಮಾಡಲ್ಲ ಎಂದು ಧಮಕಿ ಹಾಕಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಕಷ್ಟ ಕಾಲದಲ್ಲಿ ನಾವು ಎಲ್ಲರಿಗೂ ನೀರು ಕೊಡುತ್ತಿದ್ದೇವೆ. ಅವರು ಸುಖಾಸುಮ್ಮನೆ ಈ ರೀತಿಯ ಆರೋಪ ಮಾಡ್ತಿದ್ದಾರೆ. ಹೆಣ್ಮಕ್ಕಳ ಬಗ್ಗೆ ಮಾತಾಡೋಕೆ ಹೇಳಿದ್ದು ಯಾರು?. ಒಂದು ಸಲ ಮಾತನಾಡಿದ ಮೇಲೆ ಹೋಯ್ತು. ಇದು ರಾಜ್ಯದ ವಿಚಾರ, ಹೆಣ್ಮಕ್ಕಳ ಸ್ವಾಭಿಮಾನದ ವಿಚಾರ. ಬಿಜೆಪಿ ದಿನೇ ದಿನೇ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬಿಜೆಪಿಯವರು ಎಲ್ಲದಕ್ಕೂ ಮಾತನಾಡ್ತಾರೆ ಅಲ್ವಾ?. ಒಬ್ಬರಾದ್ರೂ ಹೆಚ್ಡಿಕೆ ಹೇಳಿಕೆ ಬಗ್ಗೆ ಮಾತನಾಡಿದ್ರಾ?. ಯಾಕೆ ಬಿಎಸ್‌ವೈ, ಅಶೋಕ್, ವಿಜಯೇಂದ್ರ ಮಾತನಾಡ್ತಿಲ್ಲ ಎಂದು ಉತ್ತರ ನೀಡಬೇಕು ಎಂದರು.
ನಾಳೆ ರಾಹುಲ್ ರಾಜ್ಯ ಪ್ರವಾಸ: ನಾಳೆ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ ಮಂಡ್ಯಕ್ಕೆ ಬರ್ತಾರೆ. ಆಮೇಲೆ ಕೋಲಾರಕ್ಕೆ ಹೋಗ್ತಾರೆ. ಬೆಂಗಳೂರಲ್ಲಿ ಪ್ರಚಾರ ಇರಲ್ಲ. ಬೆಂಗಳೂರಿಗೆ ಬಂದು ಬಳಿಕ ಡೆಲ್ಲಿಗೆ ತೆರಳಲಿದ್ದಾರೆ. ಪ್ರಿಯಾಂಕ ಗಾಂಧಿಗೂ ರಾಜ್ಯಕ್ಕೆ ಬರಲು ಹೇಳಿದ್ದೇವೆ. ಬೇರೆ ರಾಜ್ಯಗಳಿಗೂ ತೆರಳಬೇಕಾಗಿರುವುದರಿಂದ ಅವರಿಗೆ ಒತ್ತಡ ಇದೆ. ಒಂದು ದಿನ ಬರ್ಬೇಕು ಅಂತ ಕೇಳಿದ್ದೇವೆ ಎಂದು ತಿಳಿಸಿದರು.