ಬೆಂಗಳೂರು: "ನಾನು ಸಭೆಯಲ್ಲಿ ವಿದ್ಯಾರ್ಥಿ ಮೇಲೆ ಕ್ರಮ ತೆಗೆದುಕೊಳಗ್ಳುವ ಬಗ್ಗೆ ಮಾತನಾಡಿಲ್ಲ" ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನು ವಿದ್ಯಾರ್ಥಿ ಮೇಲೆ ಕ್ರಮದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಕ್ಕಳ ಮೇಲೆ ಪ್ರಾಂಶುಪಾಲರಿಗೆ ಹತೋಟಿ ಇರಬೇಕು. ಅದಕ್ಕೆ ಪ್ರಾಂಶುಪಾಲರಿಗೆ ನಾನು ಮಕ್ಕಳನ್ನು ಹತೋಟಿಯಲ್ಲಿಡಬೇಕು ಎಂದು ಹೇಳಿದ್ದು. ಮಕ್ಕಳ ಮೇಲೆ ಕ್ರಮ ಕೈಗೊಳ್ಳಲು ನನಗೇನು ಅಧಿಕಾರವಿದೆ? 50 ಸಾವಿರ ಮಕ್ಕಳು ಲೈವ್ ನೋಡ್ತಿದ್ದಾರೆ. ಅವರ ಭವಿಷ್ಯಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಕ್ಲಾಸ್ನಲ್ಲಿ ಶಿಸ್ತು ಇರಬೇಕಲ್ಲ. ನಾನು ಒಬ್ಬ ತಂದೆಯಾಗಿ ಅದನ್ನು ಹೇಳುತ್ತೇನೆ" ಎಂದರು.
ನೀವು ಟ್ರೋಲ್ ಮಾಡಿದ್ರೆ ನನಗೇನು?: ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ನಾಗೇಶ್ ನನ್ನನ್ನು ದಡ್ಡ ಅಂದ್ರು. ಈ ದಡ್ಡನನ್ನು ಜನ ಗೆಲ್ಲಿಸಿದ್ರು, ಬುದ್ಧಿವಂತರನ್ನು ಸೋಲಿಸಿದ್ರು. ನಿಮ್ಮ ಮಕ್ಕಳು ಈ ರೀತಿ ಮಾಡೋದು ಸರಿಯೇ? ನನ್ನ ಸ್ವಂತ ಮಕ್ಕಳಂತೆ ಶಾಲಾ ಮಕ್ಕಳನ್ನು ನೋಡ್ತೇನೆ. ಸಿಇಟಿ ಕಾರ್ಯಕ್ರಮ ಎಂತ ದೊಡ್ಡದು. ಅಂತದ್ದನ್ನು ನೀವು ತೋರಿಸಿ, ಟ್ರೋಲ್ ಮಾಡಿ ನನ್ನನ್ನು ಬಗ್ಗಿಸೋಕೆ ಸಾಧ್ಯವಿಲ್ಲ. ಅಂತದ್ದಕ್ಕೆಲ್ಲ ಬಗ್ಗುವವನೂ ನಾನಲ್ಲ" ಎಂದರು.
ಅನುದಾನ ವಿಚಾರದಲ್ಲಿ ಶಾಸಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, "ಯಾವ ಅಸಮಾಧಾನವೂ ಇಲ್ಲ. ನಮ್ಮ ಸರ್ಕಾರ ಹೆಚ್ಚಿನ ಅನುದಾನ ಕೊಟ್ಟಿದೆ. ನಾನು ಸೊರಬಕ್ಕೆ ಹೆಚ್ಚಿನ ಬಸ್ ತಂದಿದ್ದೇನೆ. ಸಾರಿಗೆ ಇಲಾಖೆ ಹೆಚ್ಚು ಬಸ್ ಖರೀದಿಸಿದೆ. ಅನುದಾನ ಇಲ್ಲದೆ ಇದನ್ನು ಮಾಡೋಕೆ ಆಗುತ್ತಾ? ಗ್ಯಾರೆಂಟಿಗಳಿಗೆ ನಾವು ಎಲ್ಲ ಲೆಕ್ಕಾಚಾರ ಹಾಕಿದ್ದೆವು. ನಾನು ಗ್ಯಾರೆಂಟಿ ಉಪಾಧ್ಯಕ್ಷನಾಗಿದ್ದೆ. ಆಗ ಯಾವುದಕ್ಕೆ ಎಷ್ಟು ಅಂತ ಲೆಕ್ಕ ಹಾಕಿದ್ದೆವು. ಹಾಗಾಗಿ ಅದರ ಮೇಲೆ ಏನೂ ಎಫೆಕ್ಟ್ ಇಲ್ಲ. ನಾನು ಸಚಿವ ಬಿಡಿ, ಶಾಸಕನೇ ಅಲ್ಲವೇ. ಶಾಸಕರಿಗೆ ಹೆಚ್ಚಿನ ಅನುದಾನ ಸಿಗುತ್ತಿದೆ. ನಮ್ಮಲ್ಲಿ ಕೊಠಡಿ ಹೆಚ್ಚು ಕೇಳುತ್ತಿದ್ದಾರೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ" ಎಂದರು.
ವಕ್ಫ್ ಭೂಮಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ, "ಇದು ಅವರದ್ದು, ಅದು ಇವರದ್ದು ಅಂತ ಹೇಗೆ ಹೇಳ್ತೀರಾ? ಕಾನೂನಿನಲ್ಲಿ ಅವಕಾಶಗಳು ಇರುತ್ತವೆ. ಅದರಂತೆಯೇ ಹೋಗಬೇಕಲ್ಲ. ಇಲ್ಲಿ ಅವರದ್ದು ಇವರದ್ದು ಅಂತ ಹೇಳೋಕೆ ಆಗಲ್ಲ. ಭೂಮಿ ಯಾರದ್ದು ಎನ್ನುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಹೋಗಲಿದೆ. ಈಗ ಎಲೆಕ್ಷನ್ ಮುಗೀತಲ್ಲ. ಬಿಜೆಪಿಯವರು ಆ ವಿಚಾರ ಬಿಡ್ತಾರೆ ನೋಡಿ" ಎಂದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಫಲಿತಾಂಶದ ಸುಧಾರಣೆಗೆ ಶಿಕ್ಷಣ ಕೋಪೈಲಟ್ ಯೋಜನೆ: ಸಚಿವ ಮಧು ಬಂಗಾರಪ್ಪ