ಬೆಂಗಳೂರು: ನನ್ನ ಹೇಳಿಕೆಯಿಂದ ನೇಹಾ ತಂದೆ - ತಾಯಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಬಿವಿಪಿ ಕಾರ್ಯಕರ್ತರಿಂದ ಮನೆಗೆ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಸತ್ಯಾಸತ್ಯತೆ ಗೊತ್ತಿಲ್ಲ. ಬಿಜೆಪಿ ರಾಜಕೀಯ ಮಾಡಲು ಹೋಗಿದ್ದಾರೆ. ನಮಗೆ ಜವಾಬ್ದಾರಿ ಇದೆ. ಅದರ ಬಗ್ಗೆ ತನಿಖೆ ಆಗುತ್ತೆ ಅಲ್ವಾ? ಬಂದ ವರದಿಯನ್ನ ನಾವು ತಿಳಿಸಿದ್ದೇವೆ. ನನ್ನ ಹೇಳಿಕೆಯಿಂದ ನೇಹಾ ತಂದೆ-ತಾಯಿಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುವೆ ಎಂದು ತಿಳಿಸಿದರು.
ರಾಜ್ಯಕ್ಕೆ ಮೋದಿ ಆಗಮನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೋದಿ ಅವರು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಮುಂದೇನು ಕೂಡ ಬರ್ತಾರೆ. ನಾವು ಅನೇಕ ಪ್ರಶ್ನೆ ಕೇಳಿದ್ಧೇವೆ. ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಾ ಎಂದು ಕೇಳಿದ್ದೇವೆ. GST ಷೇರ್ ಎಷ್ಟು ಕೊಟ್ಟಿದ್ದೀರಿ? ಭೀಕರ ಬರಗಾಲ ಇತ್ತು, ವಿಶೇಷ ಅನುದಾನ ಕೊಟ್ಟಿಲ್ಲ. 18 ಸಾವಿರ ಕೋಟಿ ಬರ ಪರಿಹಾರ ಪ್ರಸ್ತಾವನೆ ಇಡಲಾಗಿತ್ತು, ಅದನ್ನು ಕೊಟ್ಟಿಲ್ಲ. ಯಾವುದೇ ಹೊಸ ಯೋಜನೆ ಕೊಟ್ಟಿಲ್ಲ. ಭದ್ರ ಮೇಲ್ಡಂಡೆ ಯೋಜನೆಗೆ ಯಾವುದೇ ಸಹಕಾರ ಕೊಟ್ಟಿಲ್ಲ ಎಂದರು.
ಇದಕ್ಕೂ ಮುನ್ನ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ಹೇಳಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ ನಡೆಸಿತು. ಸದಾಶಿವನಗರದ ಗೃಹ ಸಚಿವರ ಸರ್ಕಾರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಮುತ್ತಿಗೆಗೆ ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮುತ್ತಿಗೆಗೆ ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಯತ್ನ ಹಿನ್ನೆಲೆ ಪರಮೇಶ್ವರ್ ನಿವಾಸದ ಸುತ್ತ ಬಿಗಿಭದ್ರತೆ ಏರ್ಪಡಿಸಲಾಗಿತ್ತು. 100ಕ್ಕೂ ಹೆಚ್ಚು ಪೊಲೀಸರಿಂದ ಗೃಹ ಸಚಿವರ ಮನೆ ಬಳಿ ಎರಡು ಕಡೆ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಿದ್ದರು. ಮುತ್ತಿಗೆ ವೇಳೆ ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲೇ ಇದ್ದರು.
ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು, ನ್ಯಾಯ ಕೊಡುವಂತೆ ಆಗ್ರಹಿಸಿದರು. ಕೆಲ ಹೊತ್ತು ಮನೆ ಮುಂದೆ ಕೂತು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮನೆಗೆ ಮುತ್ತಿಗೆ ಹಾಕಲು ಯತ್ಕಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.