ಶಿವಮೊಗ್ಗ: "ಲೋಕಸಭೆ ಚುನಾವಣೆಗೆ ನಿಲ್ಲಬಾರದು ಎಂದು ನನಗೆ ಪಕ್ಷದಿಂದ ಆದೇಶ ಬಂದಿದೆ, ಎಂಎಲ್ಎ ಆಗಿ ಲೋಕಸಭೆಗೆ ಸ್ಪರ್ಧೆ ಮಾಡಬಾರದು ಎಂದಿದ್ದಾರೆ" ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆಗೆ ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರಿಗೆ ಲೋಕಸಭೆ ಟಿಕೆಟ್ ಹೇಳುತ್ತಾರೆ ಅವರ ಪರವಾಗಿ ಕೆಲಸ ಮಾಡುತ್ತೇನೆ" ಎಂದು ಹೇಳಿದರು.
ಸಂಸದ ಡಿ ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ವಿಚಾರವಾಗಿ ಮಾತನಾಡಿ, "ಡಿ ಕೆ ಸುರೇಶ್ ಅವರ ಹೇಳಿಕೆ ತಪ್ಪಾಗಿದೆ. ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಇದನ್ನು ದೊಡ್ಡದಾಗಿ ಬಿಂಬಿಸಲು ಹೋಗಬೇಡಿ. ಸಂವಿಧಾನ ಬದಲಾವಣೆ ಮಾಡಬೇಕು ಅಂತಾ ಅನಂತ ಕುಮಾರ್ ಹೆಗಡೆ ಹೇಳಿದ್ದರು. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಾ?. ಬಸನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ 40 ಸಾವಿರ ಕೋಟಿ ರೂ. ಭ್ರಷ್ಟಾಚಾರದ ಆರೋಪ ಮಾಡಿದ್ದರು, ಅದರ ಬಗ್ಗೆ ತನಿಖೆ ಮಾಡಿದ್ರಾ, ಅದರ ಬಗ್ಗೆ ಬಿಜೆಪಿಯವರು ಮಾತನಾಡಿದ್ರಾ" ಎಂದು ತಿರುಗೇಟು ನೀಡಿದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದ್ದಕ್ಕೆ ಸಂತೋಷವಾಗಿದೆ: "ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮವನ್ನು ನಮ್ಮ ಗುರುಗಳಾದ ಬಂಗಾರಪ್ಪನವರು ಸ್ಥಾಪಿಸಿದ್ದರು. ನಮ್ಮ ನಿಗಮದಿಂದ ಎಷ್ಟು ಅನುಕೂಲ ಮಾಡಬೇಕೂ ಅದನ್ನು ಮಾಡುತ್ತಿದ್ದೇನೆ. ನಾನು ಬಂಗಾರಪ್ಪನವರ ಗರಡಿಯಲ್ಲಿ ಬೆಳೆದವನು. ನನಗೆ ನಿಗಮ ಮಂಡಳಿ ಸ್ಥಾನ ನೀಡಿ ಸುಮ್ಮನಿರಿಸಲು ಆಗಲ್ಲ. ಮುಂದೆ ಮಂತ್ರಿ ಸ್ಥಾನವನ್ನು ಕೇಳುತ್ತೇನೆ" ಎಂದು ಹೇಳಿದರು.
ಅಡ್ವಾಣಿಗೆ ಭಾರತ ರತ್ನ ಸಿಕ್ಕಿದ್ದಕ್ಕೆ ಸಂತಸವಾಗಿದೆ: ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಲಭಿಸಿದ್ದು ಸಂತೋಷವಾಗಿದೆ. ಹಿರಿಯ ನಾಯಕನಿಗೆ ಭಾರತ ರತ್ನ ದೊರೆತಿದೆ. ರಾಮ ಮಂದಿರ ಮೋದಿ ಉದ್ಘಾಟನೆ ಮಾಡಿ ಭಾರತ ರತ್ನ ಅವರಿಗೆ ಕೊಟ್ಟಿದ್ದಾರೆ ಎಂದರು.
8500 ಕೋಟಿ ರೂ. ವೆಚ್ಚದಲ್ಲಿ ಶರಾವತಿ ವಿದ್ಯುತ್ಗಾರದಲ್ಲಿ ಪಂಪ್ ಸ್ಟೋರೇಜ್ ನಿರ್ಮಾಣ- ಸಚಿವ ಜಾರ್ಜ್: ಶರಾವತಿ ವಿದ್ಯುತ್ ಉತ್ಪಾದನೆ ವಿಭಾಗದಲ್ಲಿ ಪಂಪ್ ಸ್ಟೋರೇಜ್ ನಿರ್ಮಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕಾಗಿ 8,500 ಕೋಟಿ ರೂ. ವೆಚ್ಚ ಮಾಡಿ ಪಂಪ್ ಸ್ಟೋರೇಜ್ ನಿರ್ಮಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲಿಂಗನಮಕ್ಕಿ ಅಣೆಕಟ್ಟೆಯಿಂದ ಜಲವಿದ್ಯುತ್ ಉತ್ಪಾದಿಸಿ ನೀರು ವಾಪಸ್ ನದಿಗೆ ಕಳುಹಿಸದೇ ಅದನ್ನು ಮರು ಬಳಕೆ ಮಾಡಲು ಪಂಪ್ ಸ್ಟೋರೇಜ್ ಮಾಡಲಾಗುತ್ತಿದೆ. ಇದರಿಂದ 24 ಗಂಟೆ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ತಿಳಿಸಿದರು.
ಇದನ್ನೂ ಓದಿ: 'ಆರ್ ಆಶೋಕ್ ಹಿಂದು ಇರಬಹುದು, ಆದ್ರೆ ಅವನಗಿಂತ ಒಳ್ಳೆಯ ಹಿಂದು ನಾನು' : ಸಿಎಂ ಸಿದ್ದರಾಮಯ್ಯ