ಶಿವಮೊಗ್ಗ: "ನಾನೇನೂ ಸನ್ಯಾಸಿ ಅಲ್ಲ. ಮಂತ್ರಿಸ್ಥಾನದ ಆಕಾಂಕ್ಷಿ. ಮಂತ್ರಿ ಮಾಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲ್ಲ. ಮೂರನೇ ಬಾರಿಗೆ ಶಾಸಕನಾಗಿದ್ದೇನೆ. ಅವಕಾಶ ಕೊಟ್ಟರೆ ಸಚಿವ ಸ್ಥಾನ ನಿಭಾಯಿಸುತ್ತೇನೆ" ಎಂದು ಅರಣ್ಯ, ಕೈಗಾರಿಕೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈ ಹಿಂದೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಒಂದು ಬಾರಿ ಚರ್ಚೆ ಆಗಿತ್ತು. ಮೊನ್ನೆ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿಯವರು ಮತ್ತು ನಮ್ಮ ಪಕ್ಷದ ಮುಖಂಡರು ಕೂತು ಚರ್ಚಿಸಿ ಮಾರ್ಚ್ವರೆಗೆ ಅದರ ಬಗ್ಗೆ ಪ್ರಸ್ತಾಪ ಮಾಡಬಾರದು ಎಂದು ಹೇಳಿದ್ದರಿಂದ ಪುನಾರಚನೆ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ" ಎಂದರು.
"ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರ ಗೆಲ್ಲುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳುತ್ತಿದ್ದರು. ಈಗ ಅವರ ನಾಯಕತ್ವದಲ್ಲಿ ಮೂರಕ್ಕೆ ಮೂರು ಸೋತಿದ್ದಾರೆ. ನೈತಿಕ ಹೊಣೆ ಹೊತ್ತು ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅವರ ರಾಜೀನಾಮೆಯನ್ನು ಬಿಜೆಪಿಯವರೇ ಕೇಳುತ್ತಿದ್ದಾರೆ, ನಾವು ಕೇಳುತ್ತಿಲ್ಲ" ಎಂದರು.
"ನಮ್ಮ ಸರ್ಕಾರ ಗಟ್ಟಿ ಇದೆ. ಉಪ ಚುನಾವಣೆಯಿಂದ ಸಿಎಂ ಹುಮ್ಮಸ್ಸಿನಲ್ಲಿದ್ದಾರೆ. ಗೊಂದಲ ಸೃಷ್ಟಿ ಮಾಡಿದ ಪಕ್ಷದಲ್ಲೇ ಈಗ ಬೆಂಕಿ ಬಿದ್ದಿದೆ. ರಾಜ್ಯ ಸರ್ಕಾರ ಸರ್ಕಾರ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿಯೇ ಜನಕಲ್ಯಾಣ ಸಮಾವೇಶ: ಡಿ.ಕೆ.ಶಿವಕುಮಾರ್