ಕೊಪ್ಪಳ: "ರಾಜ್ಯದಲ್ಲಿ ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಹಾಗೊಂದು ವೇಳೆ ಬದಲಾವಣೆ ಮಾಡುವುದಾದರೆ ನಾನೂ ಕೂಡಾ ಸಿಎಂ ಸ್ಥಾನದ ಆಕಾಂಕ್ಷಿ" ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ಕೊಪ್ಪಳದಲ್ಲಿ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, "ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಎಂ ಸ್ಥಾನ ನೀಡುವುದಾದರೆ ನಾನೇ ಇಲ್ಲಿ ಫ್ರಂಟ್ ರನ್ನರ್. ಯಾಕೆಂದರೆ ನಾನು ಅತಿ ಹೆಚ್ಚು ಬಾರಿ ಚುನಾಯಿತನಾಗಿ ಆಯ್ಕೆಯಾಗಿದ್ದೇನೆ. ನಾನೂ ಕೂಡ ಸೀನಿಯರ್ ಯಾಕಾಗಬಾರದು? ಆದರೆ, ಮುಂದಿನ ಮೂರೂವರೆ ವರ್ಷ ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಗಿರಬೇಕು. ಅಂದಾಗ ಮಾತ್ರ ರಾಜ್ಯ ಅಭಿವೃದ್ಧಿ ಆಗುತ್ತದೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬುದು ನಮ್ಮ ಆಸೆ ಕೂಡಾ" ಎಂದರು.
"ಸಿದ್ದರಾಮಯ್ಯ ಸಿಎಂ ಸೀಟ್ನಿಂದ ಇಳಿಯುತ್ತಾರೆ ಎಂದು ಯಾರು ಹೇಳಿದ್ದು? ಸದ್ಯ ಸಿಎಂ ಆಗಬೇಕು ಅಂತ ಯಾರು ಆಸೆಪಡುವ ಅವಶ್ಯಕತೆ ಇಲ್ಲ" ಎಂದು ಹೇಳಿದರು.
ಇನ್ನು, "ದೇಶಪಾಂಡೆ ಅವರ ಮಾತಲ್ಲಿ ತಪ್ಪೇನಿಲ್ಲ. ಸಿದ್ದರಾಮಯ್ಯ ಹೇಳಿದರೆ ಸಿಎಂ ಆಗುತ್ತೇನೆ ಅಂತ ಹೇಳಿದ್ದಾರೆ. ಯಾರೇ ಆಗಲಿ ಸಿಎಂ ಸ್ಥಾನಕ್ಕೆ ಆಸೆ ಪಟ್ಟರೆ ತಪ್ಪಿಲ್ಲ. ನಾನೂ ಕೂಡಾ ಲಿಂಗಾಯತರ ಕೋಟಾದಲ್ಲಿ ಬರುತ್ತೇನೆ. ನಾನು, ಬಿ.ಆರ್.ಪಾಟೀಲ್ ಇಬ್ಬರು ಸೀನಿಯರ್‌ಗಳು. ಇಬ್ಬರಲ್ಲಿ ಹೆಚ್ಚು ಬಾರಿ ಆಯ್ಕೆ ಆಗಿರುವುದು ನಾನು. ನಮ್ಮ ಪಕ್ಷ ಲಿಂಗಾಯತ ಕಮ್ಯೂನಿಟಿಗೆ ಕೊಡುವುದಾದರೆ ನನಗೆ ಕೊಡಲಿ. ನನಗೆ ಯಾವುದೇ ಮುಜುಗರ ಇಲ್ಲ. ಆದರೆ, ನಮ್ಮ ಪಕ್ಷ ಹಾಗೂ ಸಿದ್ದರಾಮಯ್ಯ ಮನಸ್ಸು ಮಾಡಬೇಕು. ಯಾವಾಗ ಯಾರು ಏನಾಗ್ತಾರೆ ಅಂತ ಗೊತ್ತಿಲ್ಲ" ಎಂದು ಮನದಾಸೆ ಹೊರಹಾಕಿದರು.
ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದೇನು?: "ಸಿಎಂ ಆಗುವ ಆಸೆ ಎಲ್ಲರಿಗೂ ಇದೆ. ನಾವು ಮುಂದಿನ ದಿನದಲ್ಲಿ ಸಿಎಂ ಆಗುತ್ತೇವೆ ಎಂದು ಹೇಳುವುದು ಸಹಜ. ಕೆಲವು ಸಚಿವರು ಮಾಧ್ಯಮದವರ ಪ್ರಶ್ನೆಗೆ ಸಿಎಂ ಆಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯರನ್ನು ಬದಲಾಯಿಸುತ್ತೇವೆ, ನಾವು ಸಿಎಂ ಆಗುತ್ತೇವೆ ಅಂತ ಯಾರೂ ಹೇಳಿಕೆ ಕೊಟ್ಟಿಲ್ಲ" ಎಂದು ಚಿಕ್ಕಬಳ್ಳಾಪುರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.