ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿರುವುದಕ್ಕೆ ವೀಣಾ ಕಾಶಪ್ಪನವರ ಇಂದು ನಡೆದ ಬೆಂಬಲಿಗರ ಸಭೆಯಲ್ಲಿ ಕಣ್ಣೀರು ಹಾಕಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಬಾಗಲಕೋಟೆ ನಗರದ ಶಿವಾನುಭವ ಚರಂತಿಮಠದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರ, ಮುಖಂಡರ ಬೆಂಬಲಿಗರ ಸಭೆಯಲ್ಲಿ ಗಳಗಳನೆ ಕಣ್ಣೀರು ಹಾಕಿ, ತಮ್ಮ ನೋವು ತೋಡಿಕೊಂಡರು.
ನನಗೆ ಸಂತೈಸಿ ಆಶೀರ್ವಾದಿಸುವುದಕ್ಕೆ ಬಂದಿರುವ ಎಲ್ಲರಿಗೂ ಧನ್ಯವಾದಗಳು. ನನಗೆ ಟಿಕೆಟ್ ಕೊಡಲಿಲ್ಲ ಪರವಾಗಿಲ್ಲ. ಆದರೆ, ನನ್ನ ಜಿಲ್ಲೆಯ ಜನರನ್ನು ನನ್ನಿಂದ ಕಸಿದುಕೊಳ್ಳುತ್ತಿದ್ದೀರಿ ಎಂದು ಕಣ್ಣೀರು ಹಾಕಿದರು. ಐದು ವರ್ಷ ಜಿಪಂ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದೆ, ಕಾರಣಾಂತರಗಳಿಂದ ಆವತ್ತು ಸಹ ರಾಜೀನಾಮೆ ಕೊಟ್ಟಿದ್ದೆ ಎಂದು ಹಳೆ ನೆನೆಪು ಮೆಲುಕು ಹಾಕಿದರು. ನನ್ನ ಜಿಲ್ಲೆಯ ಅಭಿವೃದ್ಧಿ, ಕುಡಚಿ ಮಾರ್ಗ ಪೂರ್ಣಗೊಳ್ಳಬೇಕು. ನೇಕಾರಿಕೆ ಅಭಿವೃದ್ಧಿ ಆಗಬೇಕು ಎಂದು ಬಯಸಿದವಳು ನಾನು. ಲೋಕಸಭೆಯಲ್ಲಿ ನನ್ನ ಜಿಲ್ಲೆಯ ಬಗ್ಗೆ ಧ್ವನಿಯಾಗಬೇಕೆಂದು ಬಯಸಿದವಳು ನಾನು ಎಂದು ಕಣ್ಣೀರು ಹಾಕುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಬೆಂಬಲಿಗರು ಸಹ ಕಣ್ಣೀರು ಹಾಕಿದರು.
ಸ್ಕ್ರೀನಿಂಗ್ ಕಮೀಟಿಯಲ್ಲಿ ನನ್ನ ಹೆಸರೇ ಬಂದಿಲ್ಲ ಎಂದರೆ ನನಗೆ ಎಷ್ಟು ನೋವಾಗಿರಬೇಡ. ಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯನ್ನು ಸುತ್ತಿದೆ. ಎಐಸಿಸಿ ಅಧ್ಯಕ್ಷರು ನನಗೆ ಹೇಳುತ್ತಾರೆ. ಜಿಲ್ಲೆಯಿಂದ ಕೇವಲ ಒಂದೇ ಹೆಸರು ಬಂದಿದೆ. ಎರಡು ಹೆಸರು ಬಂದಿದ್ದರೆ ಏನಾದರೂ ಮಾಡಬಹುದಿತ್ತು ಎಂದಾಗ ನನಗೆ ಎಷ್ಟು ನೋವಾಗಿರಬಾರದು. ನಾವು ಬಾಗಲಕೋಟೆ ಜಿಲ್ಲೆಯವರು ಅಸಮರ್ಥರಾ ? ನಮ್ಮ ಜಿಲ್ಲೆಯನ್ನ ಬೇರೆಯವರಿಗೆ ಮಾರಿಬಿಟ್ಟೆವಾ ಎಂದು ವೀಣಾ ಪ್ರಶ್ನಿಸಿದರು.
ನಾನು ನನ್ನ ಗಂಡನ ಮನೆಯಿಂದ ಲೋಕಸಭೆ ಸದಸ್ಯಳಾಗಬೇಕು ಅಂದುಕೊಂಡವಳು. ನಾನು ಅವಕಾಶವಾದಿ ರಾಜಕಾರಣಿ ಆಗಿದ್ರೆ ಯಾವೊತ್ತೋ ಏನೋ ಆಗುತ್ತಿದ್ದೆ, ನನ್ನ ಜಿಲ್ಲೆಯ ಜನರ ಸೇವೆ ಮಾಡೋಕೆ ನನಗೆ ಅವಕಾಶ ಕೊಡಿ ಎಂದು ಕೈಮುಗಿದು ವೀಣಾ ಕಾಶಪ್ಪನವರ ಮನವಿ ಮಾಡಿದರು. ನಮ್ಮಂತವರ ಪರಿಸ್ಥಿತಿ ಹೀಗಾದ್ರೆ, ಇನ್ನು ಸಾಮಾನ್ಯ ಕಾರ್ಯಕರ್ತರ ಗತಿ ಏನು ? ಪ್ರತಿ ಗ್ರಾಮದ ಜನರ ನಾಡಿ ಮಿಡಿತ ನಾನು ಅರಿತಿದ್ದೇನೆ. ನನ್ನ ಜಿಲ್ಲೆಯ ಜನ ಏನು ತೀರ್ಮಾನ ತಗೊಳ್ತಾರೆ ಅದಕ್ಕೆ ನಾನು ಬದ್ದ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿ ಎಂದು ಬೆಂಬಲಿಗರು ಕೂಗಾಡಿದರು. ಬಂಡಾಯ ಬಂಡಾಯ ಅಭಿಮಾನಿಗಳು ಒತ್ತಾಯಿಸಿದರು. ಇಡೀ ಸಭೆಯಲ್ಲಿ ನೆರೆದ ಜನತೆ ಎದ್ದು ವೇದಿಕೆ ಮುಂಭಾಗ ಬಂದು, ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧಿಸಿ ಎಂದು ವೀಣಾ ಕಾಶಪ್ಪನವರಿಗೆ ಆಗ್ರಹಿಸಿದರು.
ಜನರಿಗೆ ಧನ್ಯವಾದ ಹೇಳಿದ ಕಾಶಪ್ಪನವರ್: ನಂತರ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಾನು ಹುಟ್ಟಿದ್ದು ಕಾಂಗ್ರೆಸ್ನಲ್ಲಿ, ಬೆಳೆದಿದ್ದು ಕಾಂಗ್ರೆಸ್ನಲ್ಲಿ, ಸಾಯೋದು ಕಾಂಗ್ರೆಸ್ನಲ್ಲಿ, ಅಷ್ಟೊಂದು ನಂಬಿಕೆ, ವಿಶ್ವಾಸ ಪಕ್ಷದ ಮೇಲೆ ಇಟ್ಟುಕೊಂಡವನು ನಾನು, ನಮಗೆ ನೋವಾಗಿದೆ. ಈ ವೇದಿಕೆ ಯಾರ ವಿರುದ್ಧವೂ ಅಲ್ಲ, ವೀಣಾ ಕಾಶಪ್ಪನವರ ಮೇಲೆ ಅಪಾರ ನಂಬಿಕೆ ತೋರಿರುವ ನಿಮಗೆ ಅನಂತ ಧನ್ಯವಾದಗಳು ಎಂದರು.
ಲೋಕಸಭೆ ಚುನಾವಣೆಗೆ ನಮ್ಮ ಜಿಲ್ಲೆಯಿಂದ ಬಹಳಷ್ಟು ಜನ ಆಕಾಂಕ್ಷಿತರು ಇದ್ದೆವು. ಐವರು ಶಾಸಕರಲ್ಲಿ ನಾನೊಬ್ಬ ಇದೀನಿ ಅನ್ನೋದನ್ನು ನಮ್ಮ ಪಕ್ಷ ಮರೆತಂತೆ ಇದೆ. ವೀಣಾ ಕೇವಲ ನನ್ನ ಪತ್ನಿ, ಕಾಶಪ್ಪನವರ ಸೊಸೆ ಅಂತಾ ಬೆಂಬಲ ಮಾಡುತ್ತಿಲ್ಲ. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದವ್ರಿಗೆ ನ್ಯಾಯವನ್ನು ಪಕ್ಷ ಕೊಡಬೇಕಾಗುತ್ತದೆ ಎಂದು ಕುಟುಂಬ ರಾಜಕಾರಣ ಮಾಡೋಕೆ ನಾವು ಇಲ್ಲಿಗೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈಗಾಗಲೇ ನಮ್ಮ ಬೆಂಬಲಿಗರಿಗೆ ಧಮ್ಕಿ ಹಾಕಿದ್ದಾರೆ. ನಮ್ಮ ಸಮುದಾಯದ ಗುರುಗಳಿಗೆ ಧಮ್ಕಿ ಹಾಕಿದ್ದಾರೆ ಎಂದು ಮುಖಂಡರ ವಿರುದ್ಧ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು. ಶಾಸಕರ ವಿರುದ್ಧ ಸುಮ್ಮ ಸುಮ್ಮನೆ ಎತ್ತಿ ಕಟ್ತಿದಾರೆ. ಅಖಂಡ ಜಿಲ್ಲೆ ಇದ್ದಾಗಲೇ ನಮ್ಮ ತಂದೆ ಶಾಸಕ, ಮಂತ್ರಿ ಆಗಿದ್ದರು. ವಿಧಾನಸಭೆ ಚುನಾವಣೆ, ಉಪಚುನಾವಣೆಯಲ್ಲಿ ವಿಜಯಾನಂದ ಬೇಕಿತ್ತು, ವೀಣಾ ಬೇಕಿತ್ತು. ಈಗ ನೀವು ಗೆಲ್ತೀರಾ, ತಾಕತ್ತಿದೀಯಾ ಅಂತ ಪ್ರಶ್ನೆ ಮಾಡಿತ್ತೀರಿ. ತಾಕತ್ತಿನ ಬಗ್ಗೆ ಕಾಶಪ್ಪನವರ ಕುಟುಂಬಕ್ಕೆ ಪ್ರಶ್ನೆ ಮಾಡಿದ್ರೆ ಬಗ್ಗುವ ಪ್ರಶ್ನೆಯೇ ಇಲ್ಲ. ನನಗೂ ಬಹಳ ಕನಸಿದೆ, ಈ ರಾಜ್ಯವನ್ನು ಆಳಬೇಕೆಂಬ ಕನಸಿದೆ (ಸಿಎಂ). ನೀವು, ನನಗೆ ಪಕ್ಷದ ಶಿಸ್ತಿನ ಬಗ್ಗೆ ಹೇಳೋಕೆ ಬರ್ತೀರಾ?ಎಂದು ಪ್ರಶ್ನಿಸಿದರು.
ನನಗೆ ಯಾವುದೇ ಆಮಿಷವೊಡ್ಡಿ ಟಿಕೆಟ್ ತರುವುದಿಲ್ಲ. ನಮಗೆ ಜನರ ಅಶೀರ್ವಾದ ಅಷ್ಟೇ, ನಮ್ಮ ಆತ್ಮಸಾಕ್ಷಿಯಾಗಿ ಹೇಳುತ್ತೇನೆ. ಇದು ನಮ್ಮ ಮನೆತನದ ಗೌರವದ ಪ್ರಶ್ನೆಯಾಗಿದೆ. ನೇರವಾಗಿ ಹೇಳೋದು ತಪ್ಪಾ? ನನ್ನ ಮೇಲೆ ಚಾಡಿ ಹೇಳಿದ್ದಾರೆ ಎಂದು ಟಾಂಗ್ ನೀಡಿದ ಕಾಶಪ್ಪನವರ, ನಾನು ಹಿಂಗ್ ಇರಾವ್, ಏನ್ ಮಾಡ್ತೀರಿ ಮಾಡಿ. ತಾಕತ್ತಿದ್ರೆ ಮಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನಾನೂ ಕಾರಣ, ಮತದಾರ ಬಂಧುಗಳೇ ನಿವೇನು ನಿರ್ಧಾರ ಮಾಡ್ತೀರಿ ಅದು ನಮ್ಮ ನಿರ್ಧಾರ. ನಮ್ಮ ನಡೆ ಜನರ ಕಡೆಗೆ, ನಿಮ್ಮ ನಿರ್ಧಾರಕ್ಕೆ ತಕ್ಕೆಂತೆ ನಡೆಯುತ್ತೇವೆ. ಎರಡು ದಿನ ಕಾಯುತ್ತೇವೆ, ಕ್ಷೇತ್ರದ ಎಲ್ಲ ಜನರ ಸಂಪರ್ಕ ಮಾಡುತ್ತೇವೆ.ಎಲ್ಲರ ಅನಿಸಿಕೆ ಪಡೆದು ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.