ಮೈಸೂರು: ನಾನು ಯಾವುದೇ ಕಾರಣಕ್ಕೂ ಟಿಕೆಟ್ ಸಿಗಲಿ, ಸಿಗದಿರಲಿ, ನಾನೊಬ್ಬ ಬಿಜೆಪಿ ಕಾರ್ಯಕರ್ತ, ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುವುದಿಲ್ಲ. ನಾನು ಜೀವ ಇರುವವರೆಗೂ ಮೋದಿ ಭಕ್ತ, ಪಕ್ಷದ ಕಟ್ಟಾಳು, ಸಾಯುವವರೆಗೂ ಬಿಜೆಪಿ ಕಾರ್ಯಕರ್ತ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾನು ಟಿಕೆಟ್ ಸಿಗಲಿ, ಸಿಗದೆ ಇರಲಿ ಬಿಜೆಪಿ ಕಾರ್ಯಕರ್ತ, ಯಾರು ಏನೇ ಕೊಡ್ತೀನಿ ಅಂದ್ರು ಎಲ್ಲಿಗೂ ಹೋಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೋದಿಜಿ ನನಗೆ ಪ್ರೇರಣೆ: ಮೋದಿಜಿಯೇ ನನಗೆ ಸದಾ ಪ್ರೇರಣೆ ಮತ್ತು ಸ್ಫೂರ್ತಿ. ಮೋದಿಜಿ ಅವರು ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಅದನ್ನು ಸ್ವೀಕರಿಸುತ್ತೇನೆ. ಮೋದಿಗಿಂತ ದೊಡ್ಡದು ಯಾವುದು ಇಲ್ಲ, ಅವಕಾಶ ಕೊಟ್ಟರೆ ತೃಪ್ತಿ ಇದೆ, ಕೊಡದೆ ಇದ್ದರೂ ತೃಪ್ತಿ ಇದೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪನವರು ಮೋದಿ ಇದ್ದಂಗೆ: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಟಿಕೆಟ್ ವಿಚಾರದಲ್ಲಿ ಎಳೆದು ತರಬೇಡಿ, ಯಡಿಯೂರಪ್ಪನವರು ಪಕ್ಷ ಕಟ್ಟದೇ ಇದ್ದರೇ ಕರ್ನಾಟಕದಲ್ಲಿ ಬಿಜೆಪಿ ಎಲ್ಲಿ ಇರುತ್ತಿತ್ತು. ಯಡಿಯೂರಪ್ಪನವರೂ ಕರ್ನಾಟಕದಲ್ಲಿ ಕಷ್ಟ ಪಟ್ಟು ದೊಡ್ಡ ಮಟ್ಟದಲ್ಲಿ ಬಿಜೆಪಿಯನ್ನು ಕಟ್ಟಿದ್ದಾರೆ. ಆದ್ದರಿಂದಲೇ ನನ್ನಂತವರು ಸಂಸದರಾಗಿ ಆಯ್ಕೆ ಆಗಿರುವುದು. ಕರ್ನಾಟಕಕ್ಕೆ ಯಡಿಯೂರಪ್ಪನವರು ಒಂದು ರೀತಿ ಮೋದಿ ಇದ್ದಂಗೆ ಎಂದು ಪ್ರತಾಪ್ ಸಿಂಹ ಹಾಡಿ ಹೊಗಳಿದರು.
ಸಿಎಂ ಹೇಳಿಕೆಗೆ ತಿರುಗೇಟು: ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆ ಅದಕ್ಕೆ ಟಿಕೆಟ್ ತಪ್ಪುತ್ತದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿ, 2018 ರಲ್ಲಿ ಹೆಸರನ್ನು ಕೆಡಿಸಿಕೊಂಡಿದ್ದಕ್ಕೆ ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಗೆ ಹೋದರು. ಅಲ್ಲಿ ಬಾದಾಮಿಯಲ್ಲಿ ಹೆಸರು ಕೆಡಿಸಿಕೊಂಡು ಈ ಬಾರಿ ಪುನಃ ಇಲ್ಲಿಗೆ ಬಂದರು. ಸಿದ್ದರಾಮಯ್ಯ ಹಿರಿಯ ನಾಯಕರು ಈ ರೀತಿ ಹೇಳಿಕೆ ಕೊಡಬಾರದು ಅವರು ಸಹ ಚುನಾವಣೆಯಲ್ಲಿ ಸೋತಿಲ್ಲವೇ ಎಂದು ಸಿಎಂಗೆ ಟಾಂಗ್ ನೀಡಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಿಲ್ಲ: ನಾನು ಮೋದಿ ಭಕ್ತ, ಪಕ್ಷ ಟಿಕೆಟ್ ನೀಡಿದ್ರೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಇಲ್ಲವೆಂದರೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ. ನಾನು ಕಳೆದ 10 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಜನ ಬೀದಿಗೆ ಬಂದು ಟಿಕೆಟ್ ಕೊಡಬೇಕೆಂದು ಕೇಳ್ತಾ ಇದ್ದಾರೆ. ಅಷ್ಟು ನನಗೆ ಸಾಕು ಎಂದು ತಿಳಿಸಿದರು.
ಇದನ್ನೂಓದಿ:ಪ್ರಧಾನಿ ಮೋದಿಗೆ ಹೇಗೆ ದೈವಿಶಕ್ತಿ ಇದೆಯೋ ವಿಜಯಪುರದಲ್ಲಿ ಜಿಗಜಿಣಗಿಗೂ ದೈವಿ ಶಕ್ತಿ ಇದೆ: ಸಂಸದ ರಮೇಶ್ ಜಿಗಜಿಣಗಿ