ಬೆಂಗಳೂರು: ಸಹೋದರಿಯ ಎಂಗೇಜ್ಮೆಂಟ್ಗೆ ಬರಲಿಲ್ಲವೆಂದು ಹೆಂಡತಿಗೆ ಚಾಕು ಇರಿದಿದ್ದ ಗಂಡನನ್ನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪತ್ನಿ ದಿವ್ಯಶ್ರೀ (26) ಗೆ ಚಾಕು ಇರಿದಿದ್ದ ಪತಿ ಜಯಪ್ರಕಾಶ್ (32) ಎಂಬುವರನ್ನು ಬಂಧಿಸಲಾಗಿದೆ. ಫೆಬ್ರವರಿ 15ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸುಂಕದಕಟ್ಟೆಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿಯ ಮನೆಯಲ್ಲಿ ಘಟನೆ ನಡೆದಿತ್ತು.
ಪೋಷಕರ ವಿರೋಧದ ನಡುವೆಯೂ ಆರೋಪಿ ಜಯಪ್ರಕಾಶ್ ಹಾಗೂ ದಿವ್ಯಶ್ರೀ ಇಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನ ಮೂಡಲಪಾಳ್ಯದಲ್ಲಿ ವಾಸವಾಗಿದ್ದರು. ಗಂಡ ಜಯಪ್ರಕಾಶನಿಗೆ ಅನಾರೋಗ್ಯದ ಸಮಸ್ಯೆಯಿದ್ದ ಕಾರಣ ಮನೆಯ ಸಂಪೂರ್ಣ ಖರ್ಚು ವೆಚ್ಚಗಳನ್ನ ದಿವ್ಯಶ್ರಿಯೇ ನೋಡಿಕೊಳ್ಳುತ್ತಿದ್ದರು. ನಂತರ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು.
ಫೆಬ್ರವರಿ 15ರಂದು ತನ್ನ ತಂಗಿಯ ಎಂಗೇಜ್ಮೆಂಟ್ಗೆ ಬರಲಿಲ್ಲ ಎಂದು ಜಗಳ ಆರಂಭಿಸಿದ್ದ ಜಯಪ್ರಕಾಶ್, ದಿವ್ಯಶ್ರಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ವೇಳೆ ದಿವ್ಯಶ್ರಿ ಕಾಲಿಗೆ ಚಾಕು ಇರಿದ ಗಾಯಗಳಾಗಿದ್ದವು. ಬಳಿಕ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ದಿವ್ಯಶ್ರಿ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಜಯಪ್ರಕಾಶನನ್ನ ಬಂಧಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಚೆಕ್ ರಿಟರ್ನ್ ಕೇಸ್: ಖ್ಯಾತ ನಿರ್ದೇಶಕ ರಾಜ್ಕುಮಾರ್ ಸಂತೋಷಿಗೆ 2 ವರ್ಷ ಜೈಲು ಶಿಕ್ಷೆ!