ಬೆಂಗಳೂರು: ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಪ್ರಸ್ತುತ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಕಳ್ಳಸಾಗಣೆ ಪ್ರಕರಣದಲ್ಲಿ ಎನ್‌ಐಎ ಶೋಧ ಕೈಗೊಂಡಿದ್ದ ವೇಳೆ ತಲೆಮೆರೆಸಿಕೊಂಡಿದ್ದ ಮೊಹಮ್ಮದ್ ಸಜ್ಜಿದ್ ಹಲ್ದಾರ್ ಮತ್ತು ಇದ್ರಿಸ್ ಎಂಬ ಆರೋಪಿಗಳನ್ನು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಪೊಲೀಸರ ನೆರವಿನೊಂದಿಗೆ ಗುರುವಾರ ರಾತ್ರಿ ಬಂಧಿಸಿದೆ.
ನವೆಂಬರ್ 2023ರಲ್ಲಿ ಎನ್ಐಎ ರಾಷ್ಟ್ರವ್ಯಾಪಿ ದಾಳಿ ನಡೆಸಿತ್ತು. ತನಿಖೆ ಸಮಯದಲ್ಲಿ ಆರೋಪಿಗಳಾದ ಹಲ್ದಾರ್ ಮತ್ತು ಇದ್ರಿಸ್ ಭಾರತ ಬಾಂಗ್ಲಾದೇಶ ಗಡಿಯಲ್ಲಿನ ಬೆನಾಪೋಲ್ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ರಾಮಮೂರ್ತಿ ನಗರದ ಕೆ.ಚನ್ನಸಂದ್ರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಬೇರ್ಪಡಿಸುವ ಘಟಕವನ್ನು ಹಲ್ದಾರ್ ಸ್ಥಾಪಿಸಿ, ಇತರ ಬಾಂಗ್ಲಾದೇಶಿ ಪ್ರಜೆಗಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದನು. ಬೆಂಗಳೂರಿನ ಅನಂದಪುರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಬೇರ್ಪಡಿಸುವ ಘಟಕ ಸ್ಥಾಪಿಸಿದ್ದ ಇದ್ರಿಸ್ ಬಾಂಗ್ಲಾದೇಶದಿಂದ ಅಕ್ರಮವಾಗಿ ಕರೆತಂದಿದ್ದ 20ಕ್ಕೂ ಹೆಚ್ಚು ಕುಟುಂಬಗಳಿಗೆ ಭೂಮಿಯನ್ನು ಗುತ್ತಿಗೆಗೆ ಮತ್ತು ಟೆಂಟ್‌ಗಳನ್ನು ಸ್ಥಾಪಿಸಲು ನೀಡಿದ್ದನು ಎನ್ನುವುದು ಬಯಲಾಗಿದೆ.
ಕರ್ನಾಟಕ ಮೂಲದ ಕೆಲವು ವ್ಯಕ್ತಿಗಳು ಅಸ್ಸೋಂ, ತ್ರಿಪುರಾ ಮತ್ತು ಗಡಿಯಾಚೆಗಿನ ದೇಶಗಳಲ್ಲಿನ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಎನ್ಐಎ ಅಧಿಕಾರಿಗಳು ನವೆಂಬರ್ 7, 2023ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಭಾರತ-ಬಾಂಗ್ಲಾದೇಶದ ಗಡಿಯ ಮೂಲಕ ಭಾರತಕ್ಕೆ ಮಾನವ ಕಳ್ಳಸಾಗಣೆ ಮಾಡುವ ಹಾಗೂ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಕೊಡುವ ಕಳ್ಳಸಾಗಣೆದಾರರ ದೊಡ್ಡ ಜಾಲವನ್ನು ಎನ್ಐಎ ತನಿಖೆ ಬಹಿರಂಗಗೊಳಿಸಿತ್ತು.
ಪ್ರಕರಣದಲ್ಲಿ 12 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದ ಎನ್ಐಎ ಅಧಿಕಾರಿಗಳು ಐಪಿಸಿ ಹಾಗೂ ಯುಎಪಿಎ 1967ರ ಸೆಕ್ಷನ್‌ಗಳಡಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ:ಬಿಟ್ಕಾಯಿನ್ ಹಗರಣ: ಇನ್‌ಸ್ಪೆಕ್ಟರ್, ಖಾಸಗಿ ಕಂಪನಿಯ ಸೈಬರ್ ಪರಿಣಿತನಿಗೆ ಜಾಮೀನು