ಬೆಂಗಳೂರು: ಪ್ರಕರಣದ ಆರೋಪಿಯೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದ ಆರೋಪದಡಿ ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿದೆ. ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡದಿಂದ ದಾಳಿ ನಡೆದಿದೆ.
ಬಂಧನದಲ್ಲಿ ಇರಿಸಲಾಗಿದ್ದ ಆರೋಪಿಯನ್ನು ಯಾಸೀನ್ ಮಕ್ಬೂಲ್ ಖಾನ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ 2023ರಲ್ಲಿ ಅಮೃತಹಳ್ಳಿ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ನಂತರ ತಲೆಮರೆಸಿಕೊಂಡಿದ್ದ ಯಾಸೀನ್ ಮಕ್ಬೂಲ್ ಖಾನ್, ಮುಂಬೈನಲ್ಲಿದ್ದನು. ಆರೋಪಿಯ ಬಂಧನಕ್ಕೆ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ಅದರನ್ವಯ ಮುಂಬೈನಲ್ಲಿದ್ದ ಆರೋಪಿಯನ್ನು ಪತ್ತೆಹಚ್ಚಿದ್ದ ಅಮೃತಹಳ್ಳಿ ಠಾಣಾ ಪೊಲೀಸರು ಆರೋಪಿಯನ್ನು ಫೆಬ್ರವರಿ ಆರಂಭದಲ್ಲೇ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು ಎನ್ನಲಾಗಿದೆ. ಆದರೆ ಮನೆಯವರಿಗೂ ಮಾಹಿತಿ ನೀಡದೇ 10 ದಿನಗಳ ಕಾಲ ಅಕ್ರಮ ಬಂಧನದಲ್ಲಿಡಲಾಗಿದೆ ಎಂದು ಆರೋಪಿಯ ಕುಟುಂಬಸ್ಥರು ಆರೋಪಿಸಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ಮೇರೆಗೆ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಅಮೃತಹಳ್ಳಿ ಠಾಣೆ ಮೇಲೆ ದಾಳಿ ನಡೆಸಿತ್ತು. ಈ ಬಗ್ಗೆ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಈ ದಾಳಿ ಬಗ್ಗೆ ಡಿಸಿಪಿ ಹೇಳಿದ್ದಿಷ್ಟು: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ "ಆರೋಪಿಯನ್ನು ಶುಕ್ರವಾರವೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ದೂರು ಬಂದ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಠಾಣೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಮಾನವ ಹಕ್ಕುಗಳ ಆಯೋಗದ ಕಡೆಯಿಂದ ಅಧಿಕೃತ ಹೇಳಿಕೆ ಹೊರ ಬೀಳಬೇಕಿದೆ. ಆ ಬಳಿಕವೇ ಪ್ರಕರಣದ ಕುರಿತಂತೆ ಸಂಪೂರ್ಣ ಮಾಹಿತಿ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: 'ಮಾನವ ಹಕ್ಕುಗಳ ಆಯೋಗದಲ್ಲಿ 1,230 ಪ್ರಕರಣ ಇತ್ಯರ್ಥ'