ಮುಂಬೈ : ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಐಸ್ಕ್ರೀಮ್ನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಅಘಾತಕಾರಿ ಘಟನೆ ವಾಣಿಜ್ಯನಗರಿ ಮುಂಬೈನ ಮಲಾಡ್ ಎಂಬಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳಾ ಗ್ರಾಹಕಿ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದು, ಯಮ್ಮೋ ಐಸ್‌ಕ್ರೀಮ್ ಕಂಪನಿ ವಿರುದ್ಧ ಐಪಿಸಿ ಸೆಕ್ಷನ್ 272, 273 ಮತ್ತು 336ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಐಸಿಕ್ರೀಮ್ ಮತ್ತು ಅದರಲ್ಲಿ ಪತ್ತೆಯಾದ ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ನಿರೀಕ್ಷಕ ರವೀಂದ್ರ ಅದಾನೆ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಪ್ರಕಾರ, ಮಲಾಡ್‌ನ ನಿವಾಸಿ ಓರ್ಲೆಮ್ ಸಾರೊ ಎಂಬ ಮಹಿಳೆ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮೂಲಕ ಬಟರ್ಸ್ಕಾಚ್ ಐಸ್‌ಕ್ರೀಮ್ ಕೋನ್‌ಗಳನ್ನು ಆರ್ಡರ್ ಮಾಡಿದ್ದರು. ಅರ್ಧದಷ್ಟು ಐಸ್‌ಕ್ರೀಮ್ ತಿಂದ ಬಳಿಕ ನಾಲಿಗೆಗೆ ಏನೋ ವಸ್ತು ತಾಗಿದಂತಾಗಿದೆ. ಬಳಿಕ ಏನೆಂದು ನೋಡಿದಾಗ ಎರಡು ಸೆಂಟಿಮೀಟರ್ ಉದ್ದದ ಬೆರಳು ಪತ್ತೆಯಾಗಿದೆ. ವೃತ್ತಿಯಲ್ಲಿ ವೈದ್ಯೆ ಆಗಿರುವ ಓರ್ಲೆಮ್ ಮಾನವನ ಬೆರಳು ಎಂದು ಶಂಕಿಸಿ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಲಾಡ್ ಪೊಲೀಸರು ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮತ್ತು ಐಸ್‌ಕ್ರೀಮ್ ತಯಾರಿಕಾ ಕಂಪನಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಯಮ್ಮೋ ಐಸ್‌ಕ್ರೀಮ್ ಕಂಪನಿಯ ಐಸ್ಕ್ರೀಮ್ಗಳನ್ನೂ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಜತೆಗೆ ಬೆರಳು ಪತ್ತೆಯಾದ ಕೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ 4 ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ: WHO - Bird Flu In India