ಹುಬ್ಬಳ್ಳಿ: ಸ್ಮಾರ್ಟ್ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಚಿಟಗುಪ್ಪಿ ಆಸ್ಪತ್ರೆ ನಿರ್ಮಾಣಗೊಂಡು ಸುಮಾರು ಒಂದು ವರ್ಷ ಕಳೆದರೂ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಈ ಆಸ್ಪತ್ರೆಯು ರೋಗಿಗಳಿಗೆ ಸೇವೆ ನೀಡಲು ಇನ್ನೂ ಮುಕ್ತವಾಗಿಲ್ಲ. ನೂರಾರು ವರ್ಷಗಳಿಂದ ಮಹಾನಗರದ ಜನರಿಗೆ ಉತ್ತಮವಾಗಿ ಆರೋಗ್ಯ ಸೇವೆ ಸಲ್ಲಿಸುತ್ತಾ ಬಂದಿರುವ ಚಿಟಗುಪ್ಪಿ ಆಸ್ಪತ್ರೆಯನ್ನು 2018ರಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ 23 ಕೋಟಿ ರೂ ವೆಚ್ಚದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು.
ಆಸ್ಪತ್ರೆಯನ್ನು 2023ರ ಮಾರ್ಚ್ ತಿಂಗಳಲ್ಲಿ ವರ್ಚುಯಲ್ ಮೂಲಕ ಉದ್ಘಾಟನೆ ಕೊಂಡಿತ್ತು. ನಿರ್ಮಾಣ ಕಾರ್ಯ ಮುಗಿದ ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಮೂರನೇ ಹಂತದ ಪರಿಶೀಲನೆ ನಡೆದಿತ್ತು. ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆಯೂ ಸ್ಮಾರ್ಟ್ಸಿಟಿ ಅಧಿಕಾರಿಗಳು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದ್ದಾರೆ. ಆದರೆ, ಆಸ್ಪತ್ರೆಯನ್ನು ಸ್ಮಾರ್ಟ್ಸಿಟಿ ಸಂಸ್ಥೆಯಿಂದ ಮಹಾನಗರ ಪಾಲಿಕೆ ತನ್ನ ಸುಪರ್ದಿಗೆ ತಗೆದುಕೊಳ್ಳಲು ಮುಂದಾಗಿಲ್ಲ. ಇದರಿಂದ 100 ಬೆಡ್ ಸಾಮರ್ಥ್ಯ ಹೊಂದಿರುವ ಹಾಗೂ ಇತರ ಸೌಲಭ್ಯಗಳು ಇರುವ ಆಸ್ಪತ್ರೆ ಪಾಳು ಬೀಳುವ ಸ್ಥಿತಿಗೆ ಬಂದು ತಲುಪಿದೆ ಎಂಬ ಆರೋಪ ಕೇಳಿ ಬಂದಿದೆ.
ಆಸ್ಪತ್ರೆಯ ವಿಶೇಷತೆ ಏನು?: 100 ಹಾಸಿಗೆ ಸಾಮರ್ಥ್ಯ ಕಟ್ಟಡವಾಗಿದ್ದು, 2 ಅಂತಸ್ತು ಹೊಂದಿದೆ. ಹೆರಿಗೆ ಬ್ಲಾಕ್, ಆಡಳಿತಾತ್ಮಕ ಬ್ಲಾಕ್, ಆಸ್ಪತ್ರೆ ಬ್ಲಾಕ್, 8 ಒಪಿಡಿ ಬ್ಲಾಕ್ಗಳು, 2 ಆಪರೇಷನ್ ಥಿಯೇಟರ್, ಐಸಿಯು, ಎನ್ಐಸಿಯು, ಲೇಬರ್ ರೂಂ ಲ್ಯಾಬ್, 28 ಕಾರು, 40 ಬೈಕ್ ಪಾರ್ಕಿಂಗ್ಗೆ ಸ್ಥಳ ಇದೆ.
ಈ ಕುರಿತು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ 63 ಪ್ರಾಜೆಕ್ಟ್ಗಳು ನಡೆದಿವೆ, ಇದರಲ್ಲಿ ಚಿಟಗುಪ್ಪಿ ಆಸ್ಪತ್ರೆಯೂ ಸೇರಿದೆ. 63 ಪ್ರಾಜೆಕ್ಟ್ಗಳ ಪೈಕಿ 30 ಅನ್ನು ಈಗಾಗಲೇ ಹಸ್ತಾಂತರ ಮಾಡಿಕೊಂಡಿದ್ದೇವೆ. ಇಂದು ಸಂಜೆಯೊಳಗೆ 20 ಪ್ರಾಜೆಕ್ಟ್ಗಳನ್ನು ನಾವು ಹಸ್ತಾಂತರ ಮಾಡಿಕೊಳ್ಳುತ್ತಿದ್ದೇವೆ. ಚಿಟಗುಪ್ಪಿ ಆಸ್ಪತ್ರೆಯ ಪರಿಶೀಲನೆ ಪ್ರಗತಿಯಲ್ಲಿದೆ, ಹೀಗಾಗಿ ಹಸ್ತಾಂತರ ವಿಳಂಬವಾಗಿದೆ. ಚಿಟಗುಪ್ಪಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದೆ. ಚೀಫ್ ಮೆಡಿಕಲ್ ಆಫೀಸರ್(ಸಿಎಂಒ) ಅವರು ಕೊಟ್ಟಿರುವ ವರದಿಯಂತೆ ಕೆಲಸ ನಡೆಯುತ್ತಿದೆ. ಇನ್ನು ಎರಡ್ಮೂರು ದಿನಗಳಲ್ಲಿ ಚಿಟಗುಪ್ಪಿ ಆಸ್ಪತ್ರೆಯನ್ನು ಹಸ್ತಾಂತರ ಮಾಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.