ಹುಬ್ಬಳ್ಳಿ: ನಗರದ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್ ಬಲೆ ಬೀಳಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡು, ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಇಬ್ಬರು ಮಹಿಳೆ ಸೇರಿ ಐವರನ್ನು ಮಂಗಳವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹನಿಂಗ ನಂದಗಾವಿ ಮಾಹಿತಿ ನೀಡಿದ್ದಾರೆ.
ನಗರದ ಉಪನಗರ ಠಾಣೆಯಲ್ಲಿ ಈ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಮುಲ್ಲಾ ಓಣಿಯ ಜೋಯಾ ಶಬಾನಾ, ತೊರವಿಹಕ್ಕಲದ ಪರ್ವಿನ್ ಬಾನು, ಡಾಕಪ್ಪ ವೃತ್ತದ ಸಯ್ಯದ್, ಹಳೇ ಹುಬ್ಬಳ್ಳಿಯ ತೌಸಿಫ್ ರೆಹಮಾನ್, ಸಯ್ಯದ್ ತೌಸಿಫ್ ಹಾಗೂ ಅಬ್ದುಲ್ ರೆಹಮಾನ್ ಬಂಧಿತ ಆರೋಪಿಗಳು ಎಂದು ತಿಳಿಸಿದ್ದಾರೆ.
ವ್ಯಾಪಾರಿಯೊಬ್ಬರನ್ನು ಪರಿಚಯಿಸಿಕೊಂಡ ಆರೋಪಿ ಜೋಯಾ ಶಬಾನಾ, ಅವರನ್ನು ಉಣಕಲ್ ಕ್ರಾಸ್‌ಗೆ ಕರೆಸಿಕೊಂಡಿದ್ದಾಳೆ. ನಂತರ ರಾಜನಗರದ ಮನೆಗೆ ಕರೆದುಕೊಂಡು ಹೋಗಿ, ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾಳೆ. ನಂತರ ವಿಡಿಯೋ ಇಟ್ಟುಕೊಂಡು ಆರೋಪಿಗಳೆಲ್ಲ ಸೇರಿ ಕೇಳಿದಷ್ಟು ಹಣ ನೀಡದಿದ್ದರೆ, ವೈರಲ್ ಮಾಡುವುದಾಗಿ ಹೆದರಿಸಿದ್ದಾರೆ. ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ವ್ಯಾಪಾರಿಯು ಸೋಮವಾರ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು, ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಆರೋಪಿತರಿಂದ 5 ವಿವಿಧ ಕಂಪನಿಗಳ ಮೊಬೈಲ್ ಫೋನ್ಗಳು, ಎರಡು ದ್ವಿಚಕ್ರ ವಾಹನ, 9 ಸಾವಿರ ನಗದು ಸೇರಿ ಒಟ್ಟು 93 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಹೇಳಿದ್ದೇನು?: ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ ಡಿಸಿಪಿ ಮಹನಿಂಗ ನಂದಗಾವಿ, ''ಸಯ್ಯದ್ ಹಾಗೂ ಪರ್ವಿನಾ ಮೊಬೈಲ್ ನಂಬರ್ಗಳನ್ನು ಪಡೆದುಕೊಂಡು, ಜೋಯಾಗೆ ನೀಡುತ್ತಿದ್ದರು. ಬಳಿಕ ನಂಬರ್ ಹೊಂದಿರುವ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸಿಕೊಂಡು ರೂಮ್ವೊಂದಕ್ಕೆ ಕರೆಯಿಸಿಕೊಳ್ಳುತ್ತಿದ್ದರು. ತದನಂತರ, ರೂಮಿನಲ್ಲಿ ವಿಡಿಯೋ ಸೆರೆಹಿಡಿದುಕೊಂಡು, ಅದರ ಮೂಲಕ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ವ್ಯಾಪಾರಿಗೆ ಸುಮಾರು 5 ಲಕ್ಷ ರೂ. ನೀಡುವಂತೆ ಬೆದರಿಸಿದ್ದರು. ಅಲ್ಲದೆ, ಗೋವಾ, ಬೆಳಗಾವಿ ಹಾಗೂ ಹೊಸಪೇಟೆಗಳಲ್ಲೂ ಇದೇ ರೀತಿಯ ಕೃತ್ಯ ಎಸಗಿರುವ ಬಗ್ಗೆ ತನಿಖೆಯಿಂದ ಮಾಹಿತಿ ಗೊತ್ತಾಗಿದೆ. ಜೋಯಾ ಹಾಗೂ ಸಯ್ಯದ್ ಪ್ರೇಮಿಗಳಾಗಿದ್ದು, ಲಿವಿಂಗ್ ಟುಗೇದರ್ನಲ್ಲಿದ್ದರು. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ಪರಿಚಿತನಿಂದ ಪ್ರೀತಿಸಿ ಅತ್ಯಾಚಾರ ಆರೋಪ: ಯುವಕನ ಬಂಧನ