ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿ ಸೋಮವಾರದಿಂದ (ಡಿಸೆಂಬರ್ 9) ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಉಪ ಚುನಾವಣೆಯಲ್ಲಿ ಮೇಲುಗೈ ಸಾಧಿಸಿರುವ ಆಡಳಿತ ಪಕ್ಷ ಕಾಂಗ್ರೆಸ್ ಎದುರಾಳಿ ಬಿಜೆಪಿ – ಜೆಡಿಎಸ್ ಮೈತ್ರಿ ಕೂಟವನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದೆ.
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನಿಂದ ಆಡಳಿತಾರೂಢ ಕಾಂಗ್ರೆಸ್ ಬೀಗುತ್ತಿದ್ದರೆ, ತನ್ನ ಆಂತರಿಕ ಕಚ್ಚಾಟದಿಂದಲೇ ಯುದ್ಧಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನದಲ್ಲಿ ಬಿಜೆಪಿ - ಜೆಡಿಎಸ್ ಪಕ್ಷಗಳಿವೆ. ಪ್ರತಿಪಕ್ಷಗಳ ಬಳಿ ಇದ್ದ ಅಸ್ತ್ರಗಳೆಲ್ಲವೂ ಖಾಲಿಯಾದಂತಾಗಿದೆ. ಇಂತಹ ಹತ್ತು ಹಲವು ವೈರುಧ್ಯಗಳ ನಡುವೆಯೇ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಾದ ಮೂಲಭೂತ ಸೌಕರ್ಯಗಳ ಕೊರತೆಗೆ ಪರಿಹಾರ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳಿಗೆ ಸಾಕಷ್ಟು ಅಸ್ತ್ರಗಳಿದ್ದವು, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ, ಮುಡಾ ನಿವೇಶನ ಹಂಚಿಕೆ ಹಗರಣ, ವಕ್ಫ್ ಆಸ್ತಿ ವಿಚಾರ, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರ ಸಾವು, ಸಚಿವ ಆರ್.ವಿ. ತಿಮ್ಮಾಪುರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ತುದಿಗಾಲಲ್ಲಿ ನಿಂತಿದ್ದವು. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಚಾಟಿ ಬೀಸಲು ವಿಪಕ್ಷಗಳು ತಯಾರಿ ನಡೆಸಿದ್ದವು.
ತಲೆನೋವು ತಂದ ಬಣ ಬಡಿದಾಟ: ಆದರೆ, ಇದೆಲ್ಲದರ ನಡುವೆ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದು ಪ್ರತಿಪಕ್ಷಗಳ ಜಂಘಾಬಲವನ್ನೇ ಹುದುಗಿಸಿದೆ. ಉಪಚುನಾವಣೆ ಫಲಿತಾಂಶದ ನಂತರ ಪ್ರತಿಪಕ್ಷ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ಹಾದಿ-ಬೀದಿ ರಂಪಾಟವಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಕೆಳಗಿಳಿಸುವಂತೆ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸುತ್ತಿದ್ದರೆ, ಯತ್ನಾಳ್ ಅವರನ್ನೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಬಿ.ವೈ. ವಿಜಯೇಂದ್ರ ಬಣ ಪಟ್ಟು ಹಿಡಿದಿದೆ. ಈ ವಿಚಾರ ದೆಹಲಿಗೆ ತಲುಪಿದ್ದು, ಶನಿವಾರ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೆಸಲಾಗಿದೆ. ಎಲ್ಲವೂ ಸರಿಹೋಗುವ ವಿಶ್ವಾಸವನ್ನು ನಾಯಕರಲ್ಲಿ ಮೂಡಿಸಿದೆ.
ಹೋರಾಟಕ್ಕೆ ಯತ್ನಾಳ್ ಟೀಂ ಸಾಥ್? ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾವು ಸಜ್ಜಾಗಿದ್ದೇವೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳುತ್ತಿದ್ದರೂ ಬಿಜೆಪಿಯಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಎಲ್ಲಾ ಶಾಸಕರು ಕೈಜೋಡಿಸಲಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ವಿಜಯೇಂದ್ರ ಬಣದ ವಿರೋಧಿ ನಾಯಕರು ಸರ್ಕಾರದ ವಿರುದ್ಧದ ಹೋರಾಟಕ್ಕೆ ಕೈಜೋಡಿಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಇದೆಲ್ಲವೂ ಸದನದಲ್ಲಿ ಬಿಜೆಪಿಯನ್ನೇ ಮುಜುಗರಕ್ಕೆ ಸಿಲುಕಿಸಿದರೂ ಅಚ್ಚರಿಯಲ್ಲ ಎಂಬಂತಾಗಿದೆ.
ಇದನ್ನೂ ಓದಿ: 'ಸುವರ್ಣ ಸೌಧ ಉತ್ತರದ ಶಕ್ತಿಕೇಂದ್ರವಾಗಲಿ': ಚಳಿಗಾಲದ ಅಧಿವೇಶನದ ವೇಳೆ ಬೆಳಗಾವಿ 2ನೇ ರಾಜಧಾನಿಯ ಕೂಗು
ಜೆಡಿಎಸ್ನಲ್ಲೂ ಆಂತರಿಕ ಬೇಗುದಿ: ಬಿಜೆಪಿಯದು ಈ ಸ್ಥಿತಿಯಾದರೆ, ಜೆಡಿಎಸ್ ಸ್ಥಿತಿ ಕೂಡ ಭಿನ್ನವಾಗಿಲ್ಲ. ಹಿರಿಯ ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಮತ್ತಿತರರು ಪಕ್ಷದಿಂದ ಅಂತರ ಕಾಪಾಡಿಕೊಳ್ಳುತ್ತಿರುವುದು ದಳಪತಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸರ್ಕಾರದ ವಿರುದ್ಧ ಒಟ್ಟಾಗಿ ಸದನದಲ್ಲಿ ಹೋರಾಟ ಮಾಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಸೂಚನೆ ಕೊಟ್ಟಿದ್ದಾರೆ. ಆದರೆ ಪಕ್ಷದ ಕೆಲವು ನಾಯಕರ ವರ್ತನೆಯಿಂದ ಬೇಸತ್ತಿರುವ ಶಾಸಕರು ತಟಸ್ಥರಾಗಿರುವುದು ಜೆಡಿಎಸ್‌ಗೆ ಇರಿಸುಮುರಿಸು ತಂದಿದೆ.
ಸಾಮಾನ್ಯವಾಗಿ ಪ್ರತಿ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ರಣತಂತ್ರ ರೂಪಿಸುವುದು ಸರ್ವೇ ಸಾಮಾನ್ಯ. ಆದರೆ ಈ ಸಲ ಎರಡೂ ಪಕ್ಷಗಳಲ್ಲೇ ಬಣ ಬಡಿದಾಟ, ಆಂತರಿಕ ಕಚ್ಚಾಟ, ಮುಸುಕಿನ ಗುದ್ದಾಟ ಜೋರಾಗಿರುವುದರಿಂದ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲದಂತಾಗಿದೆ. ಆದ್ರೆ ಇದೆಲ್ಲದಕ್ಕೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಸಜ್ಜು: ಜಿಲ್ಲಾಧಿಕಾರಿ ಜೊತೆ 'ಈಟಿವಿ ಭಾರತ' ವಿಶೇಷ ಸಂದರ್ಶನ