ಮೈಸೂರು : ನಾಡ ಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಇಂತಹ ಜಂಬೂಸವಾರಿ ಮೆರವಣಿಗೆಯನ್ನ ಅತ್ಯಂತ ಯಶ್ವಸಿಯಾಗಿ ನಿರ್ವಹಸುವುದು ಗಜಪಡೆ. ಈ ಗಜಪಡೆಯನ್ನ ದಸರಾ ಜಂಬೂ ಸವಾರಿಗೆ ಆಯ್ಕೆ ಮಾಡುವಾಗ ವಿವಿಧ ರೀತಿಯ ಮಾನದಂಡಗಳು, ಪರೀಕ್ಷೆಗಳು, ಆನೆ ಶಿಬಿರದಲ್ಲಿ ಆನೆ ನಡಾವಳಿಕೆ ಜತೆಗೆ ಹೆಣ್ಣು ಆನೆಗೆ ಗರ್ಭೀಣಿ ಪರೀಕ್ಷೆ ಸಹ ನಡೆಸಲಾಗುತ್ತದೆ.
ಜಂಬೂ ಸವಾರಿಗೆ 18 ಆನೆಗಳು ಆಯ್ಕೆ: ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿರುವ ಕಾರಣ ರಾಜ್ಯ ಸರ್ಕಾರ ಅದ್ಧೂರಿಯಾಗಿ ದಸರಾ ಆಚರಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 48 ದಿನಗಳ ಮುಂಚೆಯೇ ಗಜಪಯಾಣದ ಮೂಲಕ ದಸರಾ ಆನೆಗಳನ್ನ 2 ಹಂತದಲ್ಲಿ ಮೈಸೂರಿಗೆ ಕರೆ ತರಲು ಅರಣ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಅದರ ಅಂಗವಾಗಿ ಈಗಾಗಲೇ ಆನೆ ಶಿಬಿರಗಳಿಗೆ ಹೋಗಿ ಹಳೆಯ ಆನೆಗಳು ಹಾಗೂ ಹೊಸ ಆನೆಗಳನ್ನ ಪರೀಕ್ಷೆ ನಡೆಸಲಾಗಿದೆ. ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಅರಣ್ಯ ಇಲಾಖೆ ಹಾಗೂ ಪಶು ವೈದ್ಯರ ತಂಡ ಪರೀಕ್ಷೆ ನಡೆಸಿದೆ. ವಿವಿಧ ಪರೀಕ್ಷೆಗಳನ್ನ ನಡೆಸಿ 18 ಅನೆಗಳನ್ನ ಆಯ್ಕೆ ಮಾಡಿದ್ದು, ಅದರಲ್ಲಿ 14 ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ. 4 ಆನೆಗಳು ಬದಲಿ ಆನೆಗಳಾಗಿ ಇರಲಿವೆ.
ದಸರಾ ಗಜಪಡೆಯಾ ಆಯ್ಕೆ ಹೇಗಾಗುತ್ತದೆ?: ಅರಣ್ಯ ಇಲಾಖೆಯ ಡಿಸಿಎಫ್, ಅರಣ್ಯಧಿಕಾರಿಗಳು ಹಾಗೂ ಪಶು ವೈದ್ಯರ ತಂಡ ಸಾಕಾನೆಗಳ ಶಿಬಿರಗಳಾದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಮತ್ತಿಗೋಡ್, ಭೀಮನಕಟ್ಟೆ, ದೊಡ್ಡ ಹರವೆ ಹಾಗೂ ಕೊಡಗಿನ ದುಬಾರೆ ಆನೆ ಶಿಬಿರ, ಬಂಡೀಪುರದ ರಾಮಂಪುರ ಆನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳನ್ನ ವಿವಿಧ ಪರೀಕ್ಷೆ ಮಾಡುತ್ತಾರೆ. ಪ್ರಾಥಮಿಕವಾಗಿ ಆಯ್ಕೆ ಮಾಡಿ, ಆ ಪಟ್ಟಿಯನ್ನು ಹಿರಿಯ ಅರಣ್ಯಧಿಕಾರಿಗಳಿಗೆ ಕಳಿಸಿಕೊಟ್ಟಿದ್ದಾರೆ.
ಆಯ್ಕೆ ಮಾಡುವಾಗ ಆನೆಗಳನ್ನ ಪರೀಶೀಲನೆ ನಡೆಸಿ, ಅವುಗಳ ದೇಹದ ಆಕಾರ, ಆರೋಗ್ಯದ ಏರುಪೇರುಗಳು ಹಾಗೂ ಹೆಣ್ಣಾನೆಗಳಾಗಿದ್ದಾರೇ ಗರ್ಭೀಣಿ ಆನೆಯೋ ಅಥವಾ ಇಲ್ಲವೂ ಎಂದು ತಿಳಿದುಕೊಳ್ಳುತ್ತಾರೆ. 60 ವರ್ಷಕ್ಕಿಂತ ಮೇಲ್ಪಟ ಆನೆಗಳ ಆರೋಗ್ಯ ಹಾಗೂ ಯಾವ ರೀತಿ ಶಬ್ಧಕ್ಕೆ ಹೊಂದಿಕೊಳ್ಳುತ್ತವೆ ಅಥವಾ ಹೆದರುತ್ತವೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ನಂತರ ಆನೆಗಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ಹಾಗೂ ದೇಹದ ಮೇಲ್ಬಾಗದಲ್ಲಿ ಯಾವುದಾದರೂ ರೀತಿ ಗಾಯಗಳು ಆಗಿವೆಯೇ ಎಂಬುದರ ಬಗ್ಗೆ ಗಮನ ಹರಿಸುತ್ತಾರೆ.
ಹೆಣ್ಣಾನೆ ಆಗಿದ್ದರೆ ಅದರ ರಕ್ತ ಪರೀಕ್ಷೆ ನಡೆಸುತ್ತಾರೆ. ಗರ್ಭಿಣಿ ಪರೀಕ್ಷೆಯನ್ನ ಶಿಬಿರದಲ್ಲಿರುವ ಪಶು ವೈದ್ಯರು ನಡೆಸಿ, ಮೈಸೂರು ಅರಣ್ಯ ಇಲಾಖೆಯ ಮುಖ್ಯ ಪಶು ವೈದ್ಯರಿಗೆ ಮಾಹಿತಿ ನೀಡುತ್ತಾರೆ. ಮುಖ್ಯ ಪಶು ವೈದ್ಯರು ಅಂತಿಮವಾಗಿ ದಸರಾ ಗಜಪಡೆಯ ದೇಹದ ಆಕಾರ, ಶಕ್ತಿ, ಸೌಮ್ಯತೆ ಹಾಗೂ ಚರ್ಮ, ಕಿವಿ, ಸೊಂಡಲು, ಕಾಲುಗಳಲ್ಲಿ ಯಾವುದಾದರೂ ರೋಗ ಲಕ್ಷಣಗಳು ಇದೆಯಾ ಎಂದು ಪರೀಕ್ಷಿಸುತ್ತಾರೆ. ಹೆಣ್ಣಾನೆಯ ರಕ್ತ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಿ ಅಲ್ಲಿಂದ ಉತ್ತರ ಬಂದ ನಂತರ ಅಂತಿಮವಾಗಿ ದಸರಾದಲ್ಲಿ ಭಾಗವಹಿಸುವ ಗಂಡಾನೆಗಳು ಯಾವುವು ಮತ್ತು ಹೆಣ್ಣಾನೆಗಳು ಯಾವುವು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಬಳಿಕ ಆನೆಗಳ ಪಟ್ಟಿಯನ್ನ ಸಿದ್ದಪಡಿಸಿ ಮುಖ್ಯ ಅರಣ್ಯಾಧಿಕಾರಿಗಳಿಗೆ ರವಾನಿಸಲಾಗುತ್ತದೆ ಎಂದು ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆ ಬಗ್ಗೆ ಮುಖ್ಯ ಪಶು ವೈದ್ಯರಾದ ಮುಜೀರ್ ಹೇಳುತ್ತಾರೆ.
ಆಯ್ಕೆಯಾದ ಆನೆಗಳು ಯಾವುವು? : ಈ ಬಾರಿ ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸುವ 18 ಆನೆಗಳನ್ನ ಅಂತಿಮ ಪಟ್ಟಿ ಸಿದ್ದಪಡಿಸಲಾಗಿದೆ. ಆಗಸ್ಟ 2 ನೇ ವಾರ ಮೊದಲ ಗಜ ಪಯಾಣದಲ್ಲಿ 9 ಆನೆಗಳು, 2ನೇ ಹಂತದಲ್ಲಿ 5 ಆನೆಗಳು, ಉಳಿದ 4 ಆನೆಗಳನ್ನ ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ.
ಆನೆಗಳ ಹೆಸರು: ಮತ್ತಿಗೋಡು ಆನೆ ಶಿಬಿರದಿಂದ ಜಂಬೂಸವಾರಿಯ ಕ್ಯಾಪ್ಟನ್ ಅಭಿಮನ್ಯು (58 ವರ್ಷ), ಏಕಲವ್ಯ (39 ವರ್ಷ), ಭೀಮನಕಟ್ಟೆ ಆನೆ ಶಿಬಿರದಿಂದ ವರಲಕ್ಷ್ಮೀ ಎಂಬ ಹೆಣ್ಣು ಆನೆ (68 ವರ್ಷ), ದುಬಾರೆ ಆನೆ ಶಿಬಿರದಿಂದ ಧನಂಜಯ್ಯ (41 ವರ್ಷ), ಗೋಪಿ (42 ವರ್ಷ), ಕಂಜನ್ (25 ವರ್ಷ), ರಾಮಂಪುರ ಆನೆ ಶಿಬಿರದಿಂದ ರೋಹಿತ್ (22 ವರ್ಷ), ಲಕ್ಷ್ಮೀ (23 ವರ್ಷ) ಎಂಬ 9 ಆನೆಗಳು ಮೊದಲ ಹಂತದ ಗಜಪಯಣದಲ್ಲಿ ಆಗಮಿಸಲಿವೆ.
ಎರಡನೇ ಹಂತದಲ್ಲಿ ದುಬಾರೇ ಆನೆ ಶಿಬಿರದಿಂದ ಪ್ರಶಾಂತ್ (51 ವರ್ಷ), ಸುಗ್ರೀವಾ (42 ವರ್ಷ), ಮತ್ತಿಗೋಡು ಆನೆ ಶಿಬಿರದಿಂದ ಮಹೇಂದ್ರ (41 ವರ್ಷ), ದೊಡ್ಡ ಹರವೇ ಶಿಬಿರದಿಂದ ಲಕ್ಷ್ಮೀ (53 ವರ್ಷ), ರಾಮಂಪುರ ಆನೆ ಶಿಬಿರದಿಂದ ಈರಣ್ಯ (37 ವರ್ಷ) ಎಂಬ ಆನೆಗಳು ಪ್ರಯಾಣ ಬೆಳಸಲಿವೆ. ಈ ಬಾರಿ ನಾಡಹಬ್ಬ ದಸರಾದಲ್ಲಿ ಭಾಗವಹಿಸಲು 14 ಆನೆಗಳನ್ನ ಅರಣ್ಯ ಇಲಾಖೆ ಗುರುತಿಸಿದೆ. ಇದರ ಜತೆಗೆ 4 ಹೆಚ್ಚುವರಿಯಾಗಿ ಆನೆಗಳನ್ನ ಕಾಯ್ದಿರಿಸಲಾಗಿದೆ. ದಸರಾದ 14 ಆನೆಗಳಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಹಾಗೂ ಇತರ ಅನಾಹುತಗಳು ಸಂಭವಿಸಿದರೇ ಪರ್ಯಾಯವಾಗಿ 4 ಆನೆಗಳಾದ ದುಬಾರೆ ಶಿಬಿರದ ಪ್ರಶಾಂತ್ (49 ವರ್ಷ), ಅಯ್ಯಪ್ಪ (13 ವರ್ಷ), ರಾಮಂಪುರ ಕ್ಯಾಂಪ್ನಿಂದ ಪಾರ್ಥಸಾರಥಿ (19 ವರ್ಷ) ಹಾಗೂ ಮಾಲಾದೇವಿ (37 ವರ್ಷ) ಕಾರ್ಯ ನಿರ್ವಹಿಸಲಿವೆ ಎಂದು ಇದೇ ಸಂದರ್ಭದಲ್ಲಿ ಡಿಸಿಎಫ್ ಬಿ.ಎಂ.ಶರಣ ಬಸಪ್ಪ ಮಾಹಿತಿ ನೀಡಿದರು.
ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಯನ್ನ ದೈಹಿಕ ಸಾಮರ್ಥ್ಯ, ಆರೋಗ್ಯದ ತಪಾಸಣೆಯಾ ಪರೀಕ್ಷೆ, ಸ್ವಭಾವ, ಮದವೇರಿದಿಯಾ ಅಥವಾ ಇಲ್ಲಾವೆ..? ಜತೆಗೆ ಹೆಣ್ಣಾನೆಗೆ ಗರ್ಭೀಣಿ ಪರೀಕ್ಷೆ ಮಾಡಿಸಿ, ವರದಿ ಬಂದ ನಂತರ ಗಜಪಡೆಯನ್ನ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಕರೆತರಲಾಗುತ್ತದೆ. ಹೀಗೆ ಮುಂದಿನ ದಿನಗಳಲ್ಲಿ ಗಜಪಡೆಯ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲಾಗುವುದು.